ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ತಿಮ್ಮಾಪುರ ಗ್ರಾಮದ 19 ವರ್ಷದ ಯುವತಿ ಶ್ರೇಯಾ ಎನ್. ಗೌಡ, ದೇಶದ ಪ್ರತಿಷ್ಠಿತ 2026ರ ಯುಪಿಎಸ್‌ಸಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆ (ಎನ್‌ಡಿಎ-1)ಯಲ್ಲಿ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಅತ್ಯುನ್ನತ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ, ಶ್ರೇಯಾ ತಮ್ಮ ಮೊದಲ ಪ್ರಯತ್ನದಲ್ಲೇ ಈ ಅಪ್ರತಿಮ ಸಾಧನೆ ಗೈದಿದ್ದಾರೆ.
ಭದ್ರಾವತಿಯ ಬಿಜಿಎಸ್ ಸೆಂಟ್ರಲ್ ಶಾಲೆಯಲ್ಲಿ 10ನೇ ತರಗತಿವರೆಗೆ ಓದಿ ತಾಲ್ಲೂಕಿಗೆ ಟಾಪರ್ ಆಗಿದ್ದ ಶ್ರೇಯಾ, ನಂತರ ಬೆಂಗಳೂರಿನ ಬೇಸ್ (BASE) ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ್ದರು. ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಎನ್ಐಟಿಕೆ (NITK), ಸೂರತ್ಕಲ್‌ನಲ್ಲಿ ಇಂಜಿನಿಯರಿಂಗ್ ಓದುತ್ತಿರುವ ಇವರು, ಈಗ ದೇಶಸೇವೆಯ ಬೃಹತ್ ಕನಸಿಗಾಗಿ ಇಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ತೊರೆದು ಎನ್‌ಡಿಎ ಸೇರಲಿದ್ದಾರೆ.
2021ರ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು. 8ನೇ ತರಗತಿಯಲ್ಲಿದ್ದಾಗ ಮಹಿಳೆಯರಿಗೂ NDA ಪ್ರವೇಶಕ್ಕೆ ಅವಕಾಶ ನೀಡಿದ ಆದೇಶ ಹೊರಬಿದ್ದಾಗ, ಇವರು ಸೇನೆ ಸೇರುವ ದೃಢ ಸಂಕಲ್ಪ ಮಾಡಿದ್ದರು.
ಇದೀಗ ಶ್ರೇಯಾ ತನ್ನ ಸಾಧನೆಯಿಂದ ಇಡೀ ದೇಶವೇ ತನ್ನತ್ತ ತಿರುಗಿನೋಡುವಂತೆ ಮಾಡಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ತನ್ನ ಕನಸ್ಸನ್ನು ನನಸು ಮಾಡಿಕೊಂಡಿದ್ದಾರೆ.
ನವೆಂಬರ್ 5ರಂದು ಯುಪಿಎಸ್‌ಸಿ ಪ್ರಕಟಿಸಿದ ಅಂತಿಮ ಫಲಿತಾಂಶದಲ್ಲಿ ಒಟ್ಟು 617 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇವರಲ್ಲಿ 551 ಪುರುಷರು ಮತ್ತು 66 ಮಹಿಳಾ ಅಭ್ಯರ್ಥಿಗಳಿದ್ದಾರೆ. ಮಹಿಳಾ ವಿಭಾಗದ ಮೆರಿಟ್ ಪಟ್ಟಿಯಲ್ಲಿ ಶ್ರೇಯಾ ಎನ್. ಗೌಡ ಮೊದಲ ಸ್ಥಾನದಲ್ಲಿದ್ದರೆ, ಅವಿಕಾ ಶರ್ಮಾ ದ್ವಿತೀಯ ಹಾಗೂ ರಾಜಶ್ರೀ ರೈ ತೃತೀಯ ಸ್ಥಾನ ಗಳಿಸಿದ್ದಾರೆ.
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಮೂಲಕ ಅಭ್ಯರ್ಥಿಗಳಿಗೆ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಅಧಿಕಾರಿಗಳಾಗಿ ರೂಪುಗೊಳ್ಳಲು ತರಬೇತಿ ಪಡೆಯುವ ಅವಕಾಶ ದೊರೆಯುತ್ತದೆ.
ಕರ್ನಾಟಕ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರು ಶ್ರೇಯಾ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಶಸ್ತ್ರ ಪಡೆಗಳಿಗೆ ಸೇರಿ ದೇಶಸೇವೆ ಮಾಡಬೇಕೆಂಬ ಅವರ ಬಹುದಿನಗಳ ಕನಸಿನ ಹಿನ್ನೆಲೆಯಲ್ಲಿ ಮೊದಲ ಪ್ರಯತ್ನದಲ್ಲೇ ಪಡೆದಿರುವ ಈ ಯಶಸ್ಸು ವಿಶೇಷವಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕೃತ ಸಾಮಾಜಿಕ ಜಾಲತಾಣದ ಸಂದೇಶದಲ್ಲಿ ಶ್ಲಾಘಿಸಲಾಗಿದೆ. ರಾಜ್ಯದ ಯುವತಿಯರಿಗೆ ಶ್ರೇಯಾ ಅವರ ಸಾಧನೆ ಸ್ಫೂರ್ತಿಯಾಗಲಿ ಎಂದು ಹಾರೈಸಲಾಗಿದೆ.


