November 14, 2026
;
maruvesha

 

 

ಬಳ್ಳಾರಿ, ಚಿಕ್ಕಮಗಳೂರು, ಮೈಸೂರು ಹಾಗೂ ಆಂಧ್ರಪ್ರದೇಶದ ಕೆಲ ಜಿಲ್ಲೆಗಳಲ್ಲಿ ಬಡ ಕುಟುಂಬದ ಸುಂದರ ಯುವತಿಯರನ್ನು ವಂಚಿಸಿ ಹೈಟೆಕ್ ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದ ಬೃಹತ್ ವಂಚಕರ ಜಾಲವೊಂದನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

‘ಲಕ್ಷ್ಮೀ ಪೂಜೆ  ಮತ್ತು ಹಣದ ಮಳೆ’ಯ ಹೆಸರಿನಲ್ಲಿ ಮುಗ್ಧ ಯುವತಿಯರನ್ನು ವಂಚಿಸಿ, ಲೈಂಗಿಕ ದೌರ್ಜನ್ಯ ಹಾಗೂ ಹೈಟೆಕ್ ವೇಶ್ಯಾವಾಟಿಕೆ ದಂಧೆಗೆ   ಬಳಸಿಕೊಳ್ಳುತ್ತಿದ್ದ ಬೃಹತ್ ಅಂತರಾಜ್ಯ ಜಾಲವನ್ನು ಬಳ್ಳಾರಿ ಪೊಲೀಸರು ಸಿನಿಮೀಯ ಮಾದರಿಯಲ್ಲಿ ಭೇದಿಸಿದ್ದಾರೆ.

‘ಅಕ್ಕ ಪಡೆ’ಯ ಮಹಿಳಾ ಪೊಲೀಸ್ ಸಿಬ್ಬಂದಿಯ ಎರಡು ತಿಂಗಳ ರಹಸ್ಯ ಕಾರ್ಯಾಚರಣೆಯ ಫಲವಾಗಿ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ.

ದಂಧೆ ನಡೆಯುತ್ತಿದ್ದುದು ಹೇಗೆ?
ಆರ್ಥಿಕ ಸಂಕಷ್ಟದಲ್ಲಿರುವ ಮತ್ತು ಮೂಢನಂಬಿಕೆಗಳನ್ನು ನಂಬುವ ಅವಿವಾಹಿತ ಯುವತಿಯರನ್ನೇ ಈ ಗ್ಯಾಂಗ್ ಗುರಿಯಾಗಿಸಿಕೊಳ್ಳುತ್ತಿತ್ತು. ಸುಂದರವಾಗಿರುವ, ಕನಿಷ್ಠ 5 ಅಡಿ 6 ಇಂಚು ಎತ್ತರವಿರುವ ಕನ್ಯೆಯರು ವಿಶೇಷ ಲಕ್ಷ್ಮೀ ಪೂಜೆ ಮಾಡಿದರೆ ಹಣದ ಮಳೆ ಸುರಿಯುತ್ತದೆ” ಎಂದು ನಂಬಿಸಿ ಯುವತಿಯರ ಮನವೊಲಿಸಲಾಗುತ್ತಿತ್ತು. ಆರಂಭದಲ್ಲಿ ಯುವತಿಯರ ಬಲಗೈ ಮತ್ತು ಬಲಗಾಲಿನ ಪ್ರತ್ಯೇಕ ಫೋಟೋಗಳನ್ನು ಪಡೆಯುತ್ತಿದ್ದ ಆರೋಪಿಗಳು, ಪೂಜೆಯಿಂದ ಬರುವ ಹಣದಲ್ಲಿ ಯುವತಿಗೆ, ಪೂಜೆ ಮಾಡುವ ಸ್ವಾಮೀಜಿಗೆ ಹಾಗೂ ಏಜೆಂಟ್‌ಗೆ ತಲಾ ಒಂದೊಂದು ಪಾಲು ಸಿಗುತ್ತದೆ ಎಂದು ಆಮಿಷವೊಡ್ಡುತ್ತಿದ್ದರು. ಆದರೆ, ಪೂಜೆಯ ನೆಪದಲ್ಲಿ ಯುವತಿಯರನ್ನು ಕರೆಸಿಕೊಂಡು ಅವರ ಬೆತ್ತಲೆ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ವೇಶ್ಯಾವಾಟಿಕೆ ಮತ್ತು ಮಹಿಳಾ ಮಾರಾಟ ದಂಧೆಗೆ ಬಳಸಿಕೊಳ್ಳಲಾಗುತ್ತಿತ್ತು.

ಲಕ್ಷ್ಮೀಪೂಜೆ ಮಾಡಿದರೆ ಹಣದ ಮಳೆಯಾಗುತ್ತದೆ ಎಂದು , ಹಣದ ಮಳೆಯಾಗುವ ಚಿತ್ರ, ವೀಡಿಯೋ ತೋರಿಸಿ ನಂಬಿಸುತ್ತಿದ್ದರು.

ಈ ದಂಧೆಯ ಕುರಿತು ಮಹಿಳೆಯೊಬ್ಬರು ನೀಡಿದ ಖಚಿತ ಸುಳಿವಿನ ಮೇರೆಗೆ ಬಳ್ಳಾರಿ ಪೊಲೀಸರು ವಿಶೇಷ ತಂಡ ರಚಿಸಿದ್ದರು. ‘ಅಕ್ಕ ಪಡೆ’ಯ ಮಹಿಳಾ ಪೊಲೀಸರೇ ಬಡ ಮಹಿಳೆಯರ ಸೋಗಿನಲ್ಲಿ ಈ ಗ್ಯಾಂಗ್‌ನ ಸಂಪರ್ಕ ಬೆಳೆಸಿದ್ದರು. ಸತತ ಎರಡು ತಿಂಗಳ ಕಾಲ ರಹಸ್ಯವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಜಾಲದ ಸಂಪೂರ್ಣ ಮಾಹಿತಿ ಕಲೆಹಾಕಿ ದಾಳಿ ನಡೆಸುವ ಮೂಲಕ 11 ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಗೊವಿಂದಮ್ಮ, ನಾಗರಾಜು, ರಾಜು, ಎರ‍್ರಿಸ್ವಾಮಿ, ಈರಮ್ಮ ಮಹಮ್ಮದ್, ವಿನೂತಬಾಯಿ, ರಾಬಿಯಾ, ಗೌಸಿಯಾ, ಉಸ್ಮಾನ್, ಬಾಬುರಾವ್ ಬಂಧಿತ ಆರೋಪಿಗಳು

ಬಳ್ಳಾರಿ, ಚಿಕ್ಕಮಗಳೂರು, ಮೈಸೂರು ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದ ಈ ಜಾಲವು ಪೊಲೀಸರ ಕಣ್ಣುತಪ್ಪಿಸಲು ‘ಮೀಡಿಯಾ’, ‘ಪೇಪರ್’ ಸೇರಿದಂತೆ ಹಲವು ಕೋಡ್ ವರ್ಡ್‌ಗಳನ್ನು ಬಳಸಿ ವ್ಯವಹಾರ ನಡೆಸುತ್ತಿತ್ತು. ಈ ಇಡೀ ದಂಧೆಯ ಸೂತ್ರಧಾರ ಎನ್ನಲಾದ ಸ್ವಾಮೀಜಿಯೊಬ್ಬ ಡಿಆರ್‌ಎ (DRA) ಎಂಬ ಕೋಡ್ ವರ್ಡ್ ಮೂಲಕ ವ್ಯವಹರಿಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸ್ವಾಮೀಜಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

 

Leave a Reply

Your email address will not be published. Required fields are marked *