ವನ್ಯಜೀವಿಗಳನ್ನು ಬೇಟೆಯಾಡಿದ್ದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ಬಿನ್ನಡಿ ಗ್ರಾಮದಲ್ಲಿ ನಡೆದಿದೆ. ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಮೇಶ್ ಬಂಧಿತ ಆರೋಪಿಯಾಗಿದ್ದು, ಕಡವೆ, ಕಾಡುಕುರಿಯನ್ನು ಬೇಟೆಯಾಡಿ, ನಾಲ್ವರು ಸೇರಿ ಮಾಂಸ ಕತ್ತರಿಸಿ ಪಾಲು ಮಾಡುತ್ತಿದ್ದರು. ಈ ವೇಳೆ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ದಾಳಿಯಾಗುತ್ತಿದ್ದಂತೆ ಇನ್ನುಳಿದ ಆರೋಪಿಗಳಾದ ಮಹೇಂದ್ರ, ಪ್ರಕಾಶ್, ಮಲ್ಲಯ್ಯ ಪರಾರಿಯಾಗಿದ್ದಾರೆ.
ದಾಳಿಯ ವೇಳೆ ಎರಡು ನಾಡ ಬಂದೂಕುಗಳು, ವನ್ಯಜೀವಿ ಮಾಂಸವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಾಲ್ವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಚಿಕ್ಕಮಗಳೂರು ವಿಭಾಗ ಬೋರಯ್ಯ ಕೆ.ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಮೂಡಿಗೆರೆ ಉಪವಿಭಾಗ ಆಕರ್ಷ್ ಟಿ.ಎಮ್. IFS , ಇವರುಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯ ನೇತೃತ್ವವನ್ನು ಶಿವಕುಮಾರ್ ಬಿ.ಹೆಚ್. ವಲಯ ಅರಣ್ಯಾಧಿಕಾರಿಗಳು, ಮಂಜುನಾಥ ಜಿ. ವಲಯ ಅರಣ್ಯಾಧಿಕಾರಿಗಳು, ಮೂಡಿಗೆರೆ ವಲಯ, ಮೂಡಿಗೆರೆ ಮತ್ತು ಉಪ ವಲಯ ಅರಣ್ಯಾಧಿಕಾರಿ ರಂಜಿತ್ ಹೆಚ್.ಹೆಚ್. ಬಸವರಾಜು ಆರ್. ಭಾರತೀಬೈಲ್ ಶಾಖೆ, ರವಿರಾಜ್ ಎಂ.ಕೆ. ಉಪ ವಲಯ ಅರಣ್ಯಾಧಿಕಾರಿ, ಪುಟ್ಟಸ್ವಾಮಿ, ಸಿ.ಎಂ. ಉಪ ವಲಯ ಅರಣ್ಯಾಧಿಕಾರಿ, ಮತ್ತು ಗಸ್ತು ಅರಣ್ಯ ಪಾಲಕರಾದ ಪರಮೇಶ್, ರಘು, ಸುರೇಶ್, ಯೂಸುಫ್, ಮನು ಎ.ವಿ. ಹಾಗೂ ವಾಹನ ಚಾಲಕರಾದ ನವರಾಜ್, ಹೇಮಂತ್ ಭಾಗವಹಿಸಿದ್ದರು.


