ಉರುಳು ಹಾಕಿ ಜಿಂಕೆ ಶಿಕಾರಿ ಮಾಡಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಓರ್ವ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿರುವ ಘಟನೆ ಬಾಳೆಹೊನ್ನೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ಖಚಿತ ಮಾಜಿತ ಮೇರೆಗೆ ದಾಳಿ ನಡೆಸಿದಾಗ ಬಾಳೆಹೊನ್ನೂರು ಅರಣ್ಯ ಇಲಾಖೆ ವ್ಯಾಪ್ತಿಯ ಸಂಗಮೇಶ್ವರ ಪೇಟೆ ಸಮೀಪದ ಕುಂಬರಗೋಡು ಪರಮೇಶ್ವರ್ ಗೌಡರ ಮನೆಯಲ್ಲಿ ನವೆಂಬರ್ 11ರ ರಾತ್ರಿ ಜಿಂಕೆ ಶಿಕಾರಿ ಮಾಡಿದ ಮಾಂಸ ದೊರೆತಿದ್ದು, ಆರೋಪಿ ಪರಮೇಶ್ವರ್ ಗೌಡರ ಅವರನ್ನು ಬಂಧಿಸಲಾಗಿದೆ.
ಮರುದಿನ ಬೆಳಗ್ಗೆ ಶ್ವಾನ ದಳದೊಂದಿಗೆ ತಪಾಸಣೆ ನಡೆಸಿದಾಗ ಪೃಥ್ವಿರಾಜ್ ಎಂಬುವವರ ಮನೆ ಹಿಂಭಾಗದಲ್ಲಿ ಜಿಂಕೆಗೆ ಹಾಕಿದ್ದ ಉರುಳು, ಜಿಂಕೆಯ ತಲೆ, ಹೊಟ್ಟೆ, ಕಾಲು ಮುಂತಾದ ಅಂಗಾಂಗಗಳು ದೊರೆತಿದ್ದು ಅರಣ್ಯ ಇಲಾಖೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತೊರ್ವ ಅಪರಾಧಿ ಪೃಥ್ವಿರಾಜ್ ಪರಾರಿಯಾಗಿದ್ದಾರೆಂದು ಎಂದು ಪ್ರೊಬೆಷನರಿ ಎಸಿಎಫ್ ವಿದ್ಯಾಶ್ರೀ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಶಿವಶಂಕರ್, ರಂಜಿತ್, ಶಿವಕುಮಾರ್, ಅರಣ್ಯ ರಕ್ಷಕರಾದ ದೀಕ್ಷಿತ್, ಯೋಗಾನಂದ, ವಾಚರ್ ನಾಗರಾಜ್, ವಾಹನ ಚಾಲಕ ಆರ್. ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು. ಆರೋಪಿಯನ್ನು ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದೆಂದು ವಿದ್ಯಾಶ್ರೀ ತಿಳಿಸಿದ್ದಾರೆ. ಬಾಳೆಹೊನ್ನೂರು ಎಸಿಎಫ್ ಮೋಹನ್ ಕುಮಾರ್ ರವರ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ.


