ಇಂದಿನ ಯುವಜನರೇ ಮುಂದಿನ ನಾಯಕರು. 70 ವರ್ಷಗಳ ನಂತರ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸ್ವಲ್ಪಮಟ್ಟಿಗೆ ಕಲುಷಿತಗೊಳ್ಳುತ್ತಿರುವ ವಾತಾವರಣ ಕಾಣುತ್ತಿದೆ. ಇದರಿಂದ ಹೊರಬರಬೇಕಾದರೆ ಯುವಸಮೂಹ ಸಂವಿಧಾನ, ಸಂಸತ್ತು ಹಾಗೂ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು ಸರಿಯಾಗಿ ಕಲಿತು ಮುನ್ನಡೆಯಬೇಕು’ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಹೇಳಿದರು.
ಚಿಕ್ಕಮಗಳೂರು ನಗರದ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಗುರುವಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವ ಸಂಸತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿ ಅಡುಗೆ ಮಾಡುವಾಗ ಮಗಳಿಗೆ ಪಕ್ಕದಲ್ಲೇ ನಿಲ್ಲಿಸಿಕೊಂಡು ಹೇಳಿಕೊಡುವಂತೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ ಹಿರಿಯರು ಕಿರಿಯರಿಗೆ ಕಲಿಸಿಕೊಡಬೇಕಿದೆ. ನಮ್ಮ ಸಂಸತ್ತು ಹಾಗೂ ಸಂವಿಧಾನದ ಆಶಯಗಳನ್ನು ನಾವು ಕಲಿಯದಿದ್ದರೆ ಮುಂದಿನ ದಿನಗಳಲ್ಲಿ ವ್ಯವಸ್ಥೆಗೆ ಧಕ್ಕೆ ಬರುತ್ತದೆ. ಯುವಜನರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಸರ್ಕಾರ ಆಯೋಜಿಸಿರುವ ಈ ಯುವ ಸಂಸತ್ ಒಂದು ಉತ್ತಮ ಪೂರ್ವಪರ ಯೋಚನೆಯಾಗಿದೆ’ ಎಂದರು.
ಅಮೆರಿಕ ಮತ್ತು ಬ್ರಿಟನ್ನಂತಹ ಮುಂದುವರಿದ ದೇಶಗಳಲ್ಲೂ ಆರಂಭದಲ್ಲಿ ಮಹಿಳೆಯರಿಗೆ ಹಾಗೂ ಸಾಮಾನ್ಯ ಜನರಿಗೆ ಮತದಾನದ ಹಕ್ಕು ಇರಲಿಲ್ಲ. ಆದರೆ, ಭಾರತವು 1947ರ ಸ್ವಾತಂತ್ರ್ಯ ನಂತರ 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲೇ ಜಾತಿ, ಧರ್ಮ, ಲಿಂಗ, ಬಡವ-ಶ್ರೀಮಂತ ಎಂಬ ಯಾವುದೇ ಭೇದವಿಲ್ಲದೆ ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ನೀಡುವ ಮೂಲಕ ಇಡೀ ಪ್ರಪಂಚಕ್ಕೆ ಮಾದರಿಯಾಯಿತು ಎಂದು ತಿಳಿಸಿದರು.
ಇಂದು ಸದನಗಳಲ್ಲಿ ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ಅಸಂಸ್ಕೃತವಾಗಿ ಏಕವಚನದಲ್ಲಿ ಮಾತನಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಅಧಿಕಾರಿಗಳನ್ನು ಬೈಯುವುದು, ಖಾಸಗಿ ವಿಚಾರಗಳನ್ನು ಕೆದಕುವುದು ಪ್ರಜಾಪ್ರಭುತ್ವದ ದುರ್ದೈವ. ಯಾರನ್ನೇ ಆಗಲಿ ಏಕವಚನದಲ್ಲಿ ಸಂಬೋಧಿಸದೆ ಗೌರವಯುತವಾಗಿ ಮಾತನಾಡುವುದನ್ನು ಯುವಜನರು ಮೈಗೂಡಿಸಿಕೊಳ್ಳಬೇಕು. ಒಳ್ಳೆಯ ಮಾತುಗಳಿಂದ ಏನನ್ನಾದರೂ ಗೆಲ್ಲಬಹುದು. 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನದ ಹಕ್ಕಿನ ಜೊತೆಗೆ ಪ್ರಜಾಪ್ರಭುತ್ವವನ್ನು ಕಾಪಾಡುವ ಜವಾಬ್ದಾರಿಯನ್ನೂ ಹೊರಬೇಕು ಎಂದು ಕರೆ ನೀಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ನಿಂತ ನೀರಲ್ಲ, ಅದು ಸದಾ ಹರಿಯುತ್ತಿರಬೇಕು. ಯುವ ಪ್ರತಿನಿಧಿಗಳು ಎಲ್ಲ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಿ, ಒಳ್ಳೆಯದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಂದೆ ಚಪ್ಪಲಿ ಹೊಲಿಯುತ್ತಿದ್ದರೆ ಅಥವಾ ತಾಯಿ ಟೈಲರಿಂಗ್ ಮಾಡಿ ಮಕ್ಕಳನ್ನು ಓದಿಸಿದ್ದರೆ, ಅದನ್ನು ಹೇಳಿಕೊಳ್ಳಲು ಇಂದಿನ ಯುವಕರು ನಾಚಿಕೆ ಪಟ್ಟುಕೊಳ್ಳುತ್ತಾರೆ. ಬದಲಾಗಿ ಸುಳ್ಳು ಪ್ರತಿಷ್ಠೆಗಾಗಿ ‘ಲ್ಯಾಂಡ್ ಲಾರ್ಡ್’ ಅಥವಾ ದೊಡ್ಡ ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಳ್ಳುವ ಕೀಳರಿಮೆ ಸಮಾಜದಲ್ಲಿದೆ. ಈ ಮನಸ್ಥಿತಿ ಬದಲಾಗಬೇಕು. ನಮ್ಮ ಮೂಲವನ್ನು ಗಟ್ಟಿಯಾಗಿ ಹೇಳಿಕೊಳ್ಳುವ ಧೈರ್ಯ ಬರಬೇಕು ಎಂದರು.
ಯಾವುದೇ ಚುನಾವಣೆಗೆ ನಿಲ್ಲದೆ, ಮನೆಮನೆಗೆ ಹೋಗಿ ಕೈಮುಗಿಯದೆ ಇಂದು ನೀವೆಲ್ಲರೂ ಜಿಲ್ಲಾ ಪಂಚಾಯಿತಿ ಸದಸ್ಯರು ಕೂರುವ ಸ್ಥಾನದಲ್ಲಿ ಕುಳಿತಿದ್ದೀರಿ. ಈ ಅವಕಾಶ ಪಡೆದ ನೀವೆಲ್ಲರೂ ನಿಜಕ್ಕೂ ಅದೃಷ್ಟವಂತರು. ರಾಜಕೀಯ ಮತ್ತು ಆಡಳಿತ ವ್ಯವಸ್ಥೆ ಯಾರೊಬ್ಬರ ಸ್ವತ್ತಲ್ಲ. ಹಣ ಅಥವಾ ಜಾತಿಯ ಬಲವಿಲ್ಲದಿದ್ದರೂ, ಪ್ರಾಮಾಣಿಕವಾಗಿ ಜನರ ನಾಯಕನಾಗಬೇಕು ಎಂಬ ಛಲವಿದ್ದರೆ ಖಂಡಿತವಾಗಿಯೂ ಉನ್ನತ ಸ್ಥಾನಕ್ಕೇರಬಹುದು. ಇಂದಿನ ಈ ಯುವ ಸಂಸತ್ತಿನ ಅನುಭವ ಮುಂದೆ ನೀವು ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆಯವರೆಗೂ ಆಯ್ಕೆಯಾಗಲು ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಮತದಾನ ಎನ್ನುವುದು ಪ್ರಜೆಗಳ ಕೈಯಲ್ಲಿರುವ ಅತ್ಯಂತ ಬಲಿಷ್ಠ ಮತ್ತು ಪವಿತ್ರವಾದ ಆಯುಧ. ಇಂತಹ ಅಮೂಲ್ಯ ಮತವನ್ನು ಹಣ, ಸೀರೆ, ಕುಕ್ಕರ್ ಅಥವಾ ಮದ್ಯದಂತಹ ಕ್ಷುಲ್ಲಕ ಆಮಿಷಗಳಿಗೆ ಬಲಿಯಾಗಿ ಮಾರಾಟ ಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ರಾಜಪ್ರಭುತ್ವದ ಕಾಲದಲ್ಲಿ ಆಡಳಿತ ಮತ್ತು ನ್ಯಾಯದಾನ ಎಲ್ಲವೂ ರಾಜನ ಹಿಡಿತದಲ್ಲಿತ್ತು. ಆದರೆ, ಸಂವಿಧಾನ ಜಾರಿಯಾದ ನಂತರ ಪ್ರಜೆಗಳೇ ಪ್ರಭುಗಳಾಗಿದ್ದಾರೆ. ಅಬ್ರಹಾಂ ಲಿಂಕನ್ ಹೇಳಿದಂತೆ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ನಡೆಸುವ ಸರ್ಕಾರ ನಮ್ಮದು. ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಇನ್ನು ಮುಂದೆ ದೇಶವನ್ನಾಳುವವರು ಮಹಾರಾಣಿಯ ಗರ್ಭದಿಂದ ಹುಟ್ಟಿ ಬರುವುದಿಲ್ಲ, ಬದಲಾಗಿ ಮತಪೆಟ್ಟಿಗೆಯಿಂದ (ಬ್ಯಾಲೆಟ್ ಬಾಕ್ಸ್) ಹುಟ್ಟಿ ಬರುತ್ತಾರೆ. ಚುನಾವಣೆ ಸಂದರ್ಭದಲ್ಲಿ ಪ್ರಧಾನಿಯಿಂದ ಹಿಡಿದು ಜನಪ್ರತಿನಿಧಿಗಳವರೆಗೆ ಎಲ್ಲರೂ ಸಾಮಾನ್ಯ ನಾಗರಿಕರ ಮನೆ ಬಾಗಿಲಿಗೆ ಬಂದು ಕೈಜೋಡಿಸಿ ಮತ ಯಾಚಿಸುತ್ತಾರೆ. ಮತದಾರರು ತಮ್ಮ ಮತದ ಮಹತ್ವವನ್ನು ಅರಿತು ಜಾಗೃತರಾಗಬೇಕು ಎಂದರು.
ಇಂದಿನ ವಾಸ್ತವಿಕ ಸಂಸತ್ ಹಾಗೂ ವಿಧಾನಮಂಡಲದ ಕಲಾಪಗಳಲ್ಲಿ ವಿಚಾರಗಳ ಮುಕ್ತ ಚರ್ಚೆಗಿಂತ ಗದ್ದಲ, ಗಲಾಟೆಗಳೇ ಹೆಚ್ಚಾಗಿ ಕಂಡುಬರುತ್ತಿರುವುದು ವಿಷಾದನೀಯ. ಯುವಜನತೆಗೆ ಸಂಸದೀಯ ವ್ಯವಸ್ಥೆಯ ಪರಿಚಯ ಮಾಡಿಕೊಡುವ ಉದ್ದೇಶದಿಂದ ಯುವ ಸಂಸತ್ ಆಯೋಜಿಸಲಾಗಿದೆ. ಇಲ್ಲಿ ಯಾವುದೇ ಗದ್ದಲಗಳಿಗೆ ಆಸ್ಪದ ನೀಡದೆ, ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ರಚನಾತ್ಮಕ ಚರ್ಚೆಗಳು ನಡೆಯಬೇಕು ಎಂದು ಆಶಿಸಿದರು.
ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಒದಗಿಸಿದೆ. ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿ ಯಾವುದೇ ಕಾನೂನು ರಚಿಸಲು ಸಾಧ್ಯವಿಲ್ಲ ಎಂಬುದನ್ನು 1973ರ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಯುವಪೀಳಿಗೆ ಸಂವಿಧಾನದ ಆಶಯಗಳನ್ನು ಅರಿತು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಂಜುಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ತಿಮ್ಮರಾಜು, ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್ ಸಿಂಗಟಗೆರೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಡಿ. ರೇವಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಳು ಉಪಸ್ಥಿತರಿದ್ದರು


