73ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನ.14 ರಿಂದ 20 ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಿ.ನಾಯಕ್ ತಿಳಿಸಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಡತನ ನಿವಾರಣೆ, ಉದ್ಯೋಗ ಸೃಷ್ಟಿ, ಸಾಮಾಜಿಕ ನ್ಯಾಯದಂತಹ ಕಾರ್ಯಕ್ರಮಗಳು ಚಳುವಳಿಯ ಪ್ರಜಾಪ್ರಭುತ್ವದ ತಳಹದಿಯ ಮೂಲಕ ಯಶಸ್ವಿಯಾಗಿ ಕಾರ್ಯಗತವಾಗುತ್ತಿವೆ. ಕೃಷಿ ಕ್ರಾಂತಿ, ಕ್ಷೀರ ಕ್ರಾಂತಿ, ರಸಗೊಬ್ಬರ ಕ್ಷೇತ್ರದಲ್ಲಿ ಸಹಕಾರ ಚಳುವಳಿ ದೊಡ್ಡ ಕೊಡುಗೆ ನೀಡಿದೆ ಎಂದು ಹೇಳಿದರು.
ಈ ಬಾರಿ ಸಹಕಾರ ಸಪ್ತಾಹದ ಮುಖ್ಯ ಉದ್ದೇಶ “ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲ್ಯಾಧಾರಿತ, ವೃತ್ತಿಪರ ಸೇವೆ” ಎಂಬುದಾಗಿದ್ದು, ಸಹಕಾರ ಸಪ್ತಾಹದ ಅವಧಿಯ ಉದ್ದೇಶವನ್ನು ಕುರಿತು ಚಿಂತನ ಮಂಥನ ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಜಿಲ್ಲೆಯ ಎಲ್ಲಾ ಸಹಕಾರ ಸಂಘ/ಬ್ಯಾಂಕ್‌ಗಳ ಸಂಯುಕ್ತಾಶ್ರಯದಲ್ಲಿ ನ.14 ರಿಂದ 20 ರವರೆಗೆ ಜಿಲ್ಲೆಯಾದ್ಯಂತ ಒಂದೊAದು ದಿನ ಒಂದೊಂದು ವಿಷಯದ ಬಗ್ಗೆ ಸಹಕಾರ ಚಳುವಳಿ ಅಭಿವೃದ್ಧಿಗೆ ಪೂರಕವಾಗಿ ಚಿಂತನ ಮಂಥನ ನಡೆಸಿ ಸಹಕಾರ ಸಪ್ತಾಹ ಆಚರಿಸಬೇಕೆಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ನಡೆಸಿದ ಪೂರ್ವ ಭಾವಿ ಸಿದ್ಧತಾ ಸಭೆಯಲ್ಲಿ ನಿರ್ಣಯಿಸಿದಂತೆ ಆಚರಿಸಲಾಗುತ್ತಿದೆ ಎಂದರು.
ನ.14 ರಂದು ಬಾಳೆಹೊನ್ನೂರಿನ ರೋಟರಿ ಸಭಾ ಭವನದಲ್ಲಿ, ನ.15 ರಂದು ಚಿಕ್ಕಮಗಳೂರಿನ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ, ನ.16 ರಂದು ಶೃಂಗೇರಿಯ ಕನ್ನಡ ಭವನದಲ್ಲಿ, ನ.17 ರಂದು ಕಡೂರು ತಾಲ್ಲೂಕಿನ ಮತಿಘಟ್ಟದ ಶ್ರೀ ಬಯಲು ಬಸವೇಶ್ವರ ಸಮುದಾಯ ಭವನದಲ್ಲಿ, ನ.18 ರಂದು ಅಜ್ಜಂಪುರದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ, ನ.19 ರಂದು ಕೊಪ್ಪದ ಮಾಮ್ ಕೋಸ್ ಸಭಾಂಗಣದಲ್ಲಿ, ನ.20 ರಂದು ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ರಚನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿರುವ ಮಾದರಿ ಸಹಕಾರ ಸಂಘಗಳನ್ನು ವಲಯವಾರು ಗುರುತಿಸಿ ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಹಕಾರ ಸಪ್ತಾಹದ ಏಳೂ ದಿನಗಳ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ನಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯಶಸ್, ಇಂದ್ರೇಶ್ ಉಪಸ್ಥಿತರಿದ್ದರು.


