ಮಳಲೂರು ಗ್ರಾಮದ ಐತಿಹಾಸಿಕ ಹಾಗೂ ಪುರಾತನ ಧಾರ್ಮಿಕ ಶ್ರದ್ಧಾಕೇಂದ್ರವಾದ ದೊಡ್ಡಮ್ಮ ಮತ್ತು ಚಿಕ್ಕಮ್ಮನವರ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ದೇವಸ್ಥಾನದ ಸಮಗ್ರ ಜೀರ್ಣೋದ್ಧಾರಕ್ಕೆ ಶಾಸಕಿ ನಯನಾ ಮೋಟಮ್ಮ ಅವರು ತಮ್ಮ ಅನುದಾನದಿಂದ 50 ಲಕ್ಷ ನೀಡುವುದಾಗಿ ಘೋಷಿಸಿದರು.
ಮಳಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡ ದೇವತೆ ಶ್ರೀ ಮಳಲೂರು ಅಮ್ಮನವರ ಹಾಗೂ ಶ್ರೀ ಗುರು ಮುಳ್ಳಪ್ಪಸ್ವಾಮಿ ಮಠ ಸೇವಾಸಂಘ 23 ಗ್ರಾಮಗಳ ಭಕ್ತರ ಆರಾಧ್ಯ ದೈವವಾಗಿರುವ ದೊಡ್ಡಮ್ಮ ಮತ್ತು ಚಿಕ್ಕಮ್ಮನವರ ದೇವಸ್ಥಾನವು ಹಲವು ವರ್ಷಗಳ ಇತಿಹಾಸ ಹಾಗೂ ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ. ದೇವಸ್ಥಾನವನ್ನು ಸಂಪೂರ್ಣವಾಗಿ ನವೀಕರಿಸಿ ಸುಂದರವಾದ ನೂತನ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಗ್ರಾಮಸ್ಥರು ಹಾಗೂ ದೇವಸ್ಥಾನ ಸಮಿತಿಯವರು ಒಗ್ಗೂಡಿ ಕಾರ್ಯಕ್ಕೆ ಮುಂದಾಗಿದ್ದಾರೆ. ಸುಮಾರು 3.5 ಕೋಟಿ ರೂ. ವೆಚ್ಚದ ಅಂದಾಜು ಯೋಜನೆಯೊಂದಿಗೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕಿ ನಯನಾ ಮೋಟಮ್ಮ, ಮಳಲೂರಮ್ಮ ದೇವಸ್ಥಾನವು ಈ ಭಾಗದ ಜನರ ಬದುಕು, ನಂಬಿಕೆ ಹಾಗೂ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಪವಿತ್ರ ಕ್ಷೇತ್ರವಾಗಿದೆ. ದೇವಸ್ಥಾನಕ್ಕೆ ಈವರೆಗೆ ಸಮಗ್ರ ಜೀರ್ಣೋದ್ಧಾರ ನಡೆದಿಲ್ಲ ಎಂಬುದು ತಿಳಿದುಬಂದಿದ್ದು, ಇದೀಗ ಸಂಪೂರ್ಣವಾಗಿ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸದ ಸಂಗತಿ. ಇಂತಹ ಐತಿಹಾಸಿಕ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಕೈಹಾಕಲು ದೇವಿಯ ಅನುಗ್ರಹವೂ ಇರಬೇಕು ಎಂದರು.

ದೇವಸ್ಥಾನದ ಜೀರ್ಣೋದ್ಧಾರಕ್ಕೆ 50 ಲಕ್ಷ ಅನುದಾನ ನೀಡುವಂತೆ ಮನವಿ ಮಾಡಲಾಗಿದ್ದು, ಭಕ್ತರ ಆಶಯದಂತೆ 50 ಲಕ್ಷ ನೀಡುವುದಾಗಿ ಇದೇ ವೇದಿಕೆಯಲ್ಲಿ ಘೋಷಿಸುತ್ತೇನೆ. ದೇವಿಯ ಸೇವೆ ಮಾಡುವ ಅವಕಾಶ ದೊರೆತಿರುವುದನ್ನು ನನ್ನ ಪುಣ್ಯವೆಂದು ಭಾವಿಸುತ್ತೇನೆ. ರಾಜಕೀಯ ಲೆಕ್ಕಾಚಾರಗಳನ್ನು ಬದಿಗಿಟ್ಟು ಜನರ ನಂಬಿಕೆ ಹಾಗೂ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವುದು ನಮ್ಮ ಕರ್ತವ್ಯವಾಗಿದೆ. ಈ ಭಾಗದಲ್ಲಿ ಕಾಂಗ್ರೆಸ್‍ಗೆ ಸಾಂಪ್ರದಾಯಿಕವಾಗಿ ಕಡಿಮೆ ಮತಗಳು ಬಂದಿದ್ದರೂ ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದು ತಿಳಿಸಿದರು.
ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಗೆ ಈಗಾಗಲೇ 20 ಲಕ್ಷ ಮೀಸಲಿಡಲಾಗಿದ್ದು, ಹೆಚ್ಚುವರಿಯಾಗಿ 25 ಲಕ್ಷದ ಅಗತ್ಯವಿದೆ ಎಂಬ ಮನವಿಗೂ ಸ್ಪಂದಿಸಿ ಅನುದಾನ ಒದಗಿಸಲಾವುದು ಎಂದ ಅವರು ಸುಮಾರು 30 ವರ್ಷಗಳ ಇತಿಹಾಸ ಹೊಂದಿರುವ ಮಳಲೂರು ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿರುವ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವ ಜವಾಬ್ದಾರಿ ತಮ್ಮಮೇಲಿದ್ದು, ಅದರಿಂದ ಹಿಂದೆ ಸರಿಯುವುದಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೆಗೌಡ ಮಾತನಾಡಿ, ಮಳಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮ್ಮ ಮತ್ತು ಚಿಕ್ಕಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಊರಿನ ಹಿರಿಯರು, ಗೌಡರು ಹಾಗೂ ಭಕ್ತರು ಒಗ್ಗೂಡಿ ಮುಂದಾಗಿರುವುದು ಸಂತಸದ ಸಂಗತಿ. ಸುಮಾರು 3.5 ಕೋಟಿ ರೂ. ವೆಚ್ಚದ ಅಂದಾಜಿನಲ್ಲಿ ದೇವಸ್ಥಾನದ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ಯಾವುದೇ ಅಡೆತಡೆಯಿಲ್ಲದೆ ಸುಸೂತ್ರವಾಗಿ ಪೂರ್ಣಗೊಳ್ಳಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ತಮ್ಮ ಪ್ರದೇಶಾಭಿವೃದ್ಧಿ ಅನುದಾನದಿಂದ ದೇವಸ್ಥಾನದ ಜೀರ್ಣೋದ್ಧಾರಕ್ಕೆ 5 ಲಕ್ಷ ನೀಡುವುದಾಗಿ ಘೋಷಿಸಿ, ಗ್ರಾಮಸ್ಥರ ಮನವಿಯಂತೆ ಸ್ಥಳೀಯ ಶಾಲೆಯ ದುರಸ್ತಿಗೂ ಅನುದಾನ ಒದಗಿಸುವುದಾಗಿ ತಿಳಿಸಿದರು. ಈಗಾಗಲೇ ಲಭ್ಯವಾಗಿದ್ದ 30 ಲಕ್ಷ ಅನುದಾನದಲ್ಲಿ ಮಳಲೂರು ಶಾಲೆಯ ಅಭಿವೃದ್ಧಿಗೆ 3 ಲಕ್ಷ ಮೀಸಲಿಟ್ಟು ಅಗತ್ಯ ಕಾಮಗಾರಿಗೆ ನೆರವು ನೀಡಲಾಗಿದೆ ಎಂದರು.
ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಕೆ.ಬಿ. ಅನಂತೇಗೌಡ ಮಾತನಾಡಿ, ಮಳಲೂರು ಏತ ನೀರಾವರಿ ಯೋಜನೆಯ ಪರಿಷ್ಕೃತ ಯೋಜನಾ ವರದಿ 1996ರ ಅವಧಿಯಲ್ಲಿಯೇ ಸಿದ್ಧಗೊಂಡಿತ್ತು. ಅಂದಿನ ಸಣ್ಣ ನೀರಾವರಿ ಸಚಿವರಾಗಿದ್ದ ತಿಪ್ಪೇಸ್ವಾಮಿ ಅವರ ಅವಧಿಯಲ್ಲಿ ಯೋಜನೆಗೆ ಚಾಲನೆ ದೊರೆತಿತ್ತು. ಹಲವು ಕಾರಣಗಳಿಂದ ಯೋಜನೆ ವಿಳಂಬವಾಗಿದ್ದು, ಇದೀಗ ಮತ್ತೆ ಜೀವ ಬಂದಿದೆ. ಈ ಯೋಜನೆ ಪೂರ್ಣಗೊಂಡರೆ ಈ ಭಾಗದ ರೈತರ ಕೃಷಿ ಹಾಗೂ ಆರ್ಥಿಕ ಪರಿಸ್ಥಿತಿಗೆ ಅನುಕೂಲವಾಗಲಿದೆ ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಕೆ,ವಿ.ಶರಣ್ ಗೌಡ ಮಾತನಾಡಿ, ಹಲವು ವರ್ಷಗಳ ಕನಸಾಗಿದ್ದ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಇಂದು ಶಂಕುಸ್ಥಾಪನೆ ನೆರವೇರಿರುವುದು ಸಂತಸ ತಂದಿದೆ. ಸುಮಾರು 15 ವರ್ಷಗಳ ಹಿಂದೆಯೇ ದೇವಸ್ಥಾನ ನಿರ್ಮಾಣದ ಯೋಜನೆ ರೂಪಿಸಲಾಗಿತ್ತು. ಭಕ್ತರಿಗೆ ಅನುಕೂಲವಾಗುವಂತೆ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಹಲವು ಅಡೆತಡೆಗಳನ್ನು ನಿವಾರಿಸಿಕೊಂಡು ಇದೀಗ ಕಾಮಗಾರಿ ಆರಂಭಿಸಲಾಗಿದೆ ಎಂದರು.
ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ ದಿವಂಗತ ವೆಂಕಟರಾಮೇಗೌಡ ಹಾಗೂ ಎಂ.ಬಿ. ರುದ್ರೇಗೌಡ ಅವರನ್ನು ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್ ಬೋಜೇಗೌಡ, ದೇವಸ್ಥಾನ ಸಮಿತಿ ಕಾರ್ಯದರ್ಶಿ ಕೆ.ಕೆ.ಕೃಷ್ಣೇಗೌಡ, ಹಿರಿಯ ಮುಖಂಡರು, ನಾಡಪಟೇಲ್ ಪರಮೇಶ್, ಹೆಚ್.ಇ.ಪ್ರಸನ್ನಕುಮಾರ್, ಎಂ.ಎಲ್.ಚಂದ್ರೇಗೌಡ, ಎಂ.ಪಿ.ಸಂದೀಪ್, ಕಾರ್ಯಕಾರಿ ಮಂಡಳಿ ಸದಸ್ಯರುಗಳಾದ ಮಹೇಶ್, ಚಂದ್ರೇಗೌಡ, ಸಿದ್ಧರಾಜೇಗೌಡ, ಪರ್ವತೇಗೌಡ, ನಾಗೇಶ್ ಗೌಡ, ಗೋಪಾಲ್ ಗೌಡ, ಮಂಜೇಗೌಡ, ಶಿವಣ್ಣ ಶೆಟ್ರು, ಪರ್ವತೇಗೌಡ, ಗಂಗೇಗೌಡ, ಹೆಗ್ಗಡೆಗೌಡ, ಕಾಳೇಗೌಡ, ರಮೇಶ್‍ಗೌಡ, ಪೂರ್ಣೇಶ್, ಪ್ರಭುಗೌಡ, ಗಂಗೇಗೌಡ, ದೊದ್ದೇಗೌಡ, ಮಂಜುನಾಥ್ ವೆಂಕಟೇಶ್ ಗೌಡ, ಸೋಮಶೇಖರ್, ಶಿವಾನಂದ್, ಜಯರಾಂ, ವಿಜಯ್ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ದೇವಸ್ಥಾನ ಸಮಿತಿ ಸದಸ್ಯರು, ವಿವಿಧ ಗ್ರಾಮಗಳ ಮುಖಂಡರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ಪ್ರಸನ್ನ ಸ್ವಾಗತಿಸಿ, ಕುಮರೇಗೌಡ ವಂದಿಸಿದರು.


