November 14, 2026
;
suddi5

 

 

ಶಸ್ತ್ರವಿಲ್ಲದೆ ಸೈನಿಕ ಯುದ್ಧ ಮಾಡಲು ಸಾಧ್ಯವಿಲ್ಲವೋ, ಅದೇ ರೀತಿ ಕಾನೂನಿನ ಅರಿವು-ನೆರವಿಲ್ಲದ ನಾಗರಿಕ ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಚಿಕ್ಕಮಗಳೂರು ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಕಿರಣ್ ಕಿಣಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ನಾಗರಿಕರು, ನೈಸರ್ಗಿಕ ಪ್ರಕೋಪಕ್ಕೆ ಒಳಗಾದವರು, ವಿಕಲಚೇತನರು, ಆರೋಪಿಗಳು ಹಾಗೂ ಸರ್ಕಾರ ನಿಗದಿಪಡಿಸಿದ ವಾರ್ಷಿಕ ಆದಾಯ ಮಿತಿಗಿಂತ ಕಡಿಮೆ ಆದಾಯ ಹೊಂದಿರುವ ಎಲ್ಲಾ ಬಡ ನಾಗರಿಕರು ಉಚಿತ ಕಾನೂನು ಸೇವೆ ಪಡೆಯಲು ಅರ್ಹರು. ಈ ಯೋಜನೆಯಡಿ ಅರ್ಹರಿಗೆ ಉಚಿತವಾಗಿ ವಕೀಲರನ್ನು ನೇಮಿಸಿಕೊಡಲಾಗುತ್ತಿದ್ದು, ಕೋರ್ಟ್ ಫೀಸ್ ಭರಿಸುವುದರ ಜತೆಗೆ ಅಗತ್ಯವಿರುವ ಕಾನೂನು ದಾಖಲೆಗಳನ್ನು ಸಹ ಉಚಿತವಾಗಿ ಒದಗಿಸಲಾಗುತ್ತಿದೆ ಎಂದರು.

ಕಾನೂನಿನ ಅರಿವು ಎನ್ನುವುದು ಕೇವಲ ನ್ಯಾಯಾಧೀಶರಿಗೆ ಅಥವಾ ವಕೀಲರಿಗೆ ಮಾತ್ರ ಸೀಮಿತವಾದುದಲ್ಲ. ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕುಗಳು ಮತ್ತು ದೇಶದ ಕಾನೂನುಗಳ ಬಗ್ಗೆ ಕನಿಷ್ಠ ಜ್ಞಾನವನ್ನು ಹೊಂದಿರಬೇಕು. ಆಗ ಮಾತ್ರ ಶೋಷಣಾ ಮುಕ್ತ ಸಮಾಜದ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.

ಅರಿವಿಲ್ಲದ ಕಾರಣಕ್ಕೆ ನ್ಯಾಯ ನಿರಾಕರಣೆ ಸಲ್ಲದು, ಉಚಿತ ಕಾನೂನು ನೆರವು ಪಡೆಯುವುದು ನಮ್ಮ ಹಕ್ಕು ಎಂದು ತಿಳಿಸಿದ ಅವರು,  ನ್ಯಾಯದ ಬೆಳಕು ಪ್ರತಿ ಬಡವನ ಮನೆ ಬಾಗಿಲಿಗೆ ತಲುಪುವಂತೆ ಮಾಡಲು ನಮ್ಮ ಸುತ್ತಮುತ್ತಲಿನ ಶೋಷಿತ ಜನರಿಗೆ ಪ್ರಾಧಿಕಾರದ ಉಚಿತ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಮತ್ತು ಸರ್ಕಾರಿ ಸೇವೆಯಲ್ಲಿ ಪ್ರತಿಯೊಬ್ಬರೂ ಸಾಮಾನ್ಯ ಜ್ಞಾನ ಹಾಗೂ ಕಾನೂನಿನ ಮೂಲಭೂತ ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಅಧಿಕಾರಿಗಳಾಗಲಿ ಅಥವಾ ಸಾರ್ವಜನಿಕರಾಗಲಿ ಕಾನೂನಿನ ಉಲ್ಲಂಘನೆ ಮಾಡಿದಾಗ ನನಗೆ ಈ ನಿಯಮ ತಿಳಿದಿರಲಿಲ್ಲ ಎಂದು ಹೇಳುವುದು ಕಾನೂನಿನ ದೃಷ್ಟಿಯಲ್ಲಿ ಸ್ವೀಕಾರಾರ್ಹವಲ್ಲ ಎಂದರು.

ಯಾವುದೇ ಕೆಲಸ ಅಥವಾ ನಿರ್ಧಾರಗಳನ್ನು ಕೈಗೊಳ್ಳುವಾಗ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಒಳ್ಳೆಯ ಮನಸ್ಸಿನಿಂದ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರಿ ಖರೀದಿ ಪ್ರಕ್ರಿಯೆಗಳಲ್ಲಿ (ಏಖಿPP ಕಾಯ್ದೆ) ನಿಯಮಗಳನ್ನು ಸರಿಯಾಗಿ ಪಾಲಿಸದೆ ಲೋಪದೋಷ ಎಸಗಿದರೆ ಅಥವಾ ಬೈಪಾಸ್ ಮಾಡಲು ಯತ್ನಿಸಿದರೆ ಕಾನೂನಾತ್ಮಕ ಸಮಸ್ಯೆಗಳು ಎದುರಾಗುತ್ತವೆ ಎಂದು ಎಚ್ಚರಿಸಿದರು.

ನೈಸರ್ಗಿಕ ನ್ಯಾಯದ ತತ್ವಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಯಾರ ಮೇಲಾದರೂ ಆರೋಪ ಬಂದಾಗ ಅಥವಾ ಶಿಸ್ತುಕ್ರಮ ಕೈಗೊಳ್ಳುವಾಗ ಅವರಿಗೆ ತಮ್ಮ ಪರ ವಾದ ಮಂಡಿಸಲು ಅಥವಾ ಸ್ಪಷ್ಟನೆ ನೀಡಲು ಕನಿಷ್ಠ ಒಂದು ಅವಕಾಶ ನೀಡುವುದು ಕಡ್ಡಾಯ. ಇಲ್ಲದಿದ್ದರೆ ಸಣ್ಣ ತಾಂತ್ರಿಕ ತಪ್ಪಿನಿಂದಾಗಿ ಇಡೀ ಆದೇಶವೇ ರದ್ದಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.

ಬಡವರಿಗೆ, ಶೋಷಿತರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮಾನ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಉಚಿತ ಕಾನೂನು ನೆರವು ಹಾಗೂ ಸಲಹೆಗಳನ್ನು ನೀಡಲಾಗುತ್ತಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಲಭ್ಯವಿರುವ ಈ ಉಚಿತ ಕಾನೂನು ಸೇವೆಗಳು ಮತ್ತು ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯದೀಶ ವಿ.ಹನುಮಂತಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೀನಾಕ್ಷಿ ಆರ್ಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *