ಚಿಕ್ಕಮಗಳೂರಿನ ಸಿಐಎಂಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎಸ್ಸಿ. ನರ್ಸಿಂಗ್ (ಎಎಚ್ಎಸ್) ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ತರುವೆ ಗ್ರಾಮದ ಶೇಖರ್ ಎಂಬುವವರ ಪುತ್ರ ರಕ್ಷಿತ್ ಟಿ.ಎಸ್.(19 ವರ್ಷ) ಎಂಬ ವಿದ್ಯಾರ್ಥಿ ನವೆಂಬರ್ 7 ರಿಂದ ನಾಪತ್ತೆಯಾಗಿದ್ದಾನೆ.
ಈತ, ಹೌಸಿಂಗ್ ಬೋರ್ಡ್ನ ಸರ್ಕಾರಿ ವೃತ್ತಿಪರ ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿ ವಾಸವಾಗಿದ್ದನು ಎಂದು ತಿಳಿದುಬಂದಿದೆ. ನವೆಂಬರ್ 7 ರಂದು ಮಧ್ಯಾಹ್ನ 12.30.ರ ಸುಮಾರಿಗೆ ಹಾಸ್ಟೆಲ್ನಿಂದ ಹೊರಗೆ ಹೋದ ರಕ್ಷಿತ ಮತ್ತೆ ವಾಪಸಾಗಿಲ್ಲ. ಹಾಸ್ಟೆಲ್ನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆತ ಹೊರಗೆ ಹೋಗಿರುವುದು ದೃಢಪಟ್ಟಿದೆ. ಅದೇ ದಿನ ರಾತ್ರಿ 9 ಗಂಟೆಗೆ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿರುವುದಾಗಿ ಸ್ನೇಹಿತರಿಗೆ ತಿಳಿಸಿದ್ದ ಎನ್ನಲಾಗಿದೆ. ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕುಟುಂಬದವರ ಸಂಪರ್ಕಕ್ಕೂ ಸಿಕ್ಕಿಲ್ಲ.
ಸಂಬಂಧಿಕರು, ಸ್ನೇಹಿತರು ವಿವಿಧೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಈ ಕುರಿತು ರಕ್ಷಿತನ ಸಹೋದರ ರಂಜಿತ್ ಟಿ.ಎಸ್. ಅವರು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಚಹರೆ: ಸುಮಾರು 5.4 ಅಡಿ ಎತ್ತರ, ನೀಳಕಾಯದ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾನೆ. ನಾಪತ್ತೆಯಾದಾಗ ಕಪ್ಪು ಪ್ಯಾಂಟ್, ಬೂದು ಬಣ್ಣದ ಜಾಕೆಟ್ ಹಾಗೂ ಕಪ್ಪು ಬಣ್ಣದ ಬ್ಯಾಗ್ ಧರಿಸಿದ್ದನು. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ’ 9480805145.@ತಿಳಿಸುವಂತೆ ಮನವಿ ಮಾಡಲಾಗಿದೆ.


