ಬೇಲೂರು ತಾಲೂಕಿನಲ್ಲಿ ಕಳೆದ ಮೂರು ದಿನಗಳ ಅಂತರದಲ್ಲಿ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದು, ಜನರ ಆಕ್ರೋಶದ ಕಟ್ಟೆಯೊಡೆದಿದೆ. ನಾಗೇನಹಳ್ಳಿ ಗ್ರಾಮದಲ್ಲಿ ಸೋಮವಾರ ಮುಂಜಾನೆ ಕೃಷಿಕರೊಬ್ಬರು ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಏಕಾಏಕಿ ದಾಳಿ ಕಾಲಿನಿಂದ ತುಳಿದು ಸಾಯಿಸಿದೆ.
ಹಫೀಜುರ್ ರೆಹಮಾನ್ (57) ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿ. 3 ದಿನಗಳ ಅಂತರದಲ್ಲಿ ಕಾಡಾನೆ ದಾಳಿಗೆ ಎರಡನೇ ಬಲಿಯಾಗಿದೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಳೆದ ಶನಿವಾರ ಕಾಡಾನೆ ದಾಳಿಯಿಂದ ಕುಶಾವರ ಸಮೀಪದ ಚೌಡನಹಳ್ಳಿ ಗ್ರಾಮದ ಜಯಮ್ಮ ಮೃತಪಟ್ಟಿದ್ದರು. ಭಾನುವಾರ ಮಧ್ಯಾಹ್ನದವರೆಗೂ ಜಯಮ್ಮ ಮೃತದೇಹವಿಟ್ಟು ಗ್ರಾಮಸ್ಥರು, ರೈತ ಸಂಘ ಹಾಗೂ ಕಾಫಿ ಬೆಳೆಗಾರರು ಪ್ರತಿಭಟನೆ ನಡೆಸಿದ್ದರು. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದ್ದರು. ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಬೇಲೂರು ಭಾಗದಲ್ಲಿರುವ ಎಲ್ಲಾ ಕಾಡಾನೆಗಳನ್ನು ಭದ್ರ ಅರಣ್ಯಕ್ಕೆ ಓಡಿಸುವುದಾಗಿ ಘೋಷಣೆ ಮಾಡಿ ಸಿಸಿಎಫ್ ಏಡುಕುಂಡಲ ಆದೇಶ ಮಾಡಿದ್ದರು. ಇಂದು ಬೇಲೂರು ಭಾಗಕ್ಕೆ ಕುಮ್ಕಿ ಆನೆಗಳು ಆಗಮಿಸಲಿವೆ. ಮಂಗಳವಾರದಿಂದ ಕಾರ್ಯಾಚರಣೆ ಆರಂಭವಾಗಬೇಕಿತ್ತು. ಕಾಡಾನೆ ದಾಳಿಗೆ ಜಯಮ್ಮ ಸಾವಿನ ಬೆನ್ನಲ್ಲೇ ಇಂದು ಕಾಡಾನೆ ದಾಳಿಗೆ ಮತ್ತೋರ್ವ ಬಲಿಯಾಗಿದ್ದಾರೆ. ಈ ಹಿನ್ನೆಲೆ ಬೇಲೂರು ಪಟ್ಟಣದಲ್ಲಿ ನೂರಾರು ಜನರು ಜಮಾಯಿಸಿದ್ದು, ಪ್ರತಿಭಟನೆ ನಡೆಸಲಾಗುತ್ತಿದೆ. ಅಲ್ಲದೇ ಘಟನಾ ಸ್ಥಳಕ್ಕೆ ಪ್ರತಿಭಟನಾಕಾರರು ಅಂಬುಲೆನ್ಸ್ ತಳ್ಳಿಕೊಂಡೇ ಹೋಗಲು ಯತ್ನಿಸಿದ್ದು, ಗ್ರಾಮಸ್ಥರು ಅರಣ್ಯ ಇಲಾಖೆ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಇಂದು ಬೆಳಿಗ್ಗೆ ರೊಚ್ಚಿಗೆದ್ದ ಜನರು ಬೇಲೂರು ಮೂಡಿಗೆರೆ ರಸ್ತೆಯ ನಾಗೇನಹಳ್ಳಿಯಲ್ಲಿ ರಸ್ತೆಗೆ ಟಯರ್ ಅಡ್ಡಯಿಟ್ಟು ಬೆಂಕಿಹಚ್ಚಿ ರಸ್ತೆ ತಡೆ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕುಶಾವರ ಗ್ರಾಮದ ಬಳಿ ಸುಮಾರು ಹದಿನೇಳು ಕಾಡಾನೆಗಳು ಬೀಡುಬಿಟ್ಟಿದ್ದು, ಒಂಟಿಸಲಗವೊಂದು ಗುಂಪಿನಿಂದ ಬೇರ್ಪಟ್ಟಿದೆ. ಚೌಡನಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ಮಹಿಳೆ ಜಯಮ್ಮ ಕುಶಾವರ ಸಮೀಪ ಆಡುಗಳನ್ನು ಮೇಯಿಸುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಒಂಟಿಸಲಗ ಕಾಲಿನಿಂದ ತುಳಿದು ಸಾಯಿಸಿತ್ತು, ಕಾಡಾನೆ ದಾಳಿಗೆ ಜಯಮ್ಮ ಸಾವಿನ ಬೆನ್ನಲ್ಲೇ ಇಂದು ಕಾಡಾನೆ ದಾಳಿಗೆ ಮತ್ತೋರ್ವ ಬಲಿಯಾಗಿದ್ದಾರೆ..
ಏತನ್ಮಧ್ಯೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಅವರು ಹಾಸನಕ್ಕೆ ಪ್ರಯಾಣಿಸುತ್ತಿದ್ದು, ಅಲ್ಲಿ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. ಸಂತ್ರಸ್ತರ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹತ್ತು ಕಾಡಾನೆಗಳ ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ಆದೇಶ
ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಎರಡು ದಿನಗಳ ಅಂತರದಲ್ಲಿ ಇಬ್ಬರು ಬಲಿಯಾಗಿರುವ ಬೆನ್ನಲ್ಲೇ ಜನಾಕ್ರೋಶ ಕಟ್ಟೆಯೊಡೆದಿದೆ. ಪ್ರತಿಭಟನೆ, ರಸ್ತೆ ತಡೆಯಂತಹ ಘಟನೆಗಳ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಜನರಲ್ಲಿ ಭೀತಿ ಸೃಷ್ಟಿಸಿರುವ ಹತ್ತು ಕಾಡಾನೆಗಳ ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ಆದೇಶ ನೀಡಿದೆ. ಈ ಸಂಬಂಧ ರಾಜ್ಯ ಪ್ರಧಾನ ವನ್ಯಜೀವಿ ಸಂರಕ್ಷಣಾ ಅಧಿಕಾರಿ ಮಹತ್ವದ ಸೂಚನೆ ನೀಡಿದ್ದಾರೆ.
ಆದೇಶದಲ್ಲಿ ಏನಿದೆ?
ಹಾಸನ ವಿಭಾಗದಲ್ಲಿ ಮಾನವ-ಆನೆ ಸಂಘರ್ಷಕ್ಕೆ ಕಾರಣವಾಗಿರುವ 10 ಗಂಡು ಕಾಡಾನೆಗಳನ್ನು ನಿರ್ದಿಷ್ಟವಾಗಿ ಗುರುತಿಸಿ, ಸುರಕ್ಷತಾ ದೃಷ್ಟಿಯಿಂದ ಹಾಗೂ ಅವುಗಳಿಂದ ಉಂಟಾಗಬಹುದಾದ ಪ್ರಾಣಹಾನಿ ಹಾಗೂ ಇನ್ನಿತರ ದಾಳಿ ಮತ್ತು ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಆನೆಗಳನ್ನು ಸೆರೆ ಹಿಡಿಯಬೇಕು. ಬಳಿಕ ಆನೆಗಳ ಆರೋಗ್ಯ ಸ್ಥಿತಿಗತಿಗಳಿಗೆ ಅನುಗುಣವಾಗಿ ಅವುಗಳ ಆವಾಸಕ್ಕೆ ಸೂಕ್ತವಾಗಿರುವ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ವನ್ಯಜೀವಿ (ರಕ್ಷಣಾ) ಕಾಯ್ದೆ, 1972ರ ಸೆಕ್ಷನ್ 11(1)(ಎ) ರನ್ವಯ ಅನುಮತಿ ನೀಡಲಾಗಿದೆ. ಆನೆ ಸೆರೆ ಕಾರ್ಯಾಚರಣೆಗೆ ಉಲ್ಲೇಖ (3)ರ ಆದೇಶದಂತೆ ಪುನರ್ ರಚಿಸಲಾಗಿರುವ ಸಾಕಾನೆ ತಂಡ ಎ ಮತ್ತು ಸಿ ಕುಮ್ಕಿ ಆನೆಗಳನ್ನು ಉಪಯೋಗಿಸಿಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.


