November 9, 2026
;
deviramm 2

 

 

ರಾಜ್ಯದ ಪ್ರಸಿದ್ಧ ಧಾರ್ಮಿಕ ಶ್ರದ್ಧಾ ಕೇಂದ್ರ ಚಿಕ್ಕಮಗಳೂರು ತಾಲ್ಲೂಕಿನ ಬಿಂಡಿಗ ದೇವಿರಮ್ಮನ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತಸಾಗರ ಹರಿದು ಬಂದಿದೆ. ಭಾನುವಾರ ನರಕ ಚತುರ್ದಶಿಯ ಶುಭದಿನದಂದು ದೇವಿಯ ದರ್ಶನ ಪಡೆಯಲು ಭಕ್ತರು ಮುಂಜಾನೆಯಿಂದಲೇ ಬೆಟ್ಟ ಏರಲು ಆರಂಭಿಸಿದ್ದರು. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಆಗಮಿಸಿರುವ ಸಾವಿರಾರು ಭಕ್ತರು ಬರಿಗಾಲಲ್ಲೇ ಕಲ್ಲು-ಮುಳ್ಳಿನ ಕಠಿಣ ಹಾದಿಯಲ್ಲಿ ಸಾಗುತ್ತಾ, ಬರೋಬ್ಬರಿ 3800 ಅಡಿ ಎತ್ತರದ ಕಡಿದಾದ ಬೆಟ್ಟವನ್ನು  ಏರಿದರು.

ಪುರಾಣ ಪ್ರಸಿದ್ಧವಾದ ಈ ಪುಣ್ಯ ಕ್ಷೇತ್ರಕ್ಕೆ ಮೈಸೂರು ಅರಸರ ಮನೆಯಿಂದ ಇಂದಿಗೂ ದೇವಿಗೆ ಒಪ್ಪಿಸಲಾಗುವ ಮಡಿಲಕ್ಕಿ ಸೇವೆ ಈ ಐತಿಹಾಸಿಕ ಜಾತ್ರೆಯ ಧಾರ್ಮಿಕ ಪರಂಪರೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಾರಿ ಭಕ್ತರ ಅನುಕೂಲಕ್ಕಾಗಿ ಸತತ ಎರಡು ದಿನಗಳ ಕಾಲ ಬೆಟ್ಟ ಏರಲು ವಿಶೇಷ ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲಾಡಳಿತದ ಸೂಚನೆಯಂತೆ ಹಗಲಿನಲ್ಲಿ ಮಾತ್ರ ಭಕ್ತರು ಬೆಟ್ಟ ಏರಲು ಅವಕಾಶ ನೀಡಲಾಗಿತ್ತು.

ಬೆಟ್ಟದ ತುದಿಯಲ್ಲಿ ಭಕ್ತರು ಏರಲು ಅನುಕೂಲವಾಗುವಂತೆ ಅಳವಡಿಸಿದ್ದ ಕಂಬಿ ಮುರಿದುಬಿದ್ದು ಓರ್ವ ಬಾಲಕ ಸೇರಿದಂತೆ 20ಕ್ಕೂ ಹೆಚ್ಚು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಭಕ್ತರನ್ನ ಅಗ್ನಿಶಾಮಕ ಸಿಬ್ಬಂದಿ ಬೆಟ್ಟದಿಂದ ಹೊತ್ತುತಂದು, ಬಳಿಕ ಆಂಬ್ಯುಲೆನ್ಸ್‌ ಮೂಲಕ ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತ ದೇವಿರಮ್ಮ ಬೆಟ್ಟ  ಹತ್ತುವಾಗ ಹೃದಯಾಘಾತಕ್ಕೊಳಗಾಗಿ   ಭಕ್ತರೊಬ್ಬರು ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಸಮೀಪದ ಕನ್ಯಾಡಿ ನಿವಾಸಿ ಲಕ್ಷ್ಮಣ್ (32) ಮೃತ ದುರ್ದೈವಿ. ಬೆಟ್ಟ ಹತ್ತುವ ವೇಳೆ ಹೃದಯಾಘಾತಕ್ಕೊಳಗಾದ ಲಕ್ಷ್ಮಣ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಈ ಹಿಂದೆ ಹೃದಯಾಘಾತಕ್ಕೆ ಒಳಗಾಗಿ ಬೈಪಾಸ್ ಸರ್ಜರಿ ಮಾಡಿಕೊಂಡಿದ್ದ ಇವರು ರವಿವಾರ ಮುಂಜಾನೆ ಸ್ನೇಹಿತರೊಂದಿಗೆ ದೇವಿರಮ್ಮ ಬೆಟ್ಟ ಏರುತ್ತಿದ್ದ ವೇಳೆ ಉಸಿರಾಟದ ತೊಂದರೆಯಿಂದ ಕುಸಿದು ಬಿದ್ದಿದ್ದಾರೆ.

ಕೂಡಲೇ ರಕ್ಷಣಾ ಸಿಬ್ಬಂದಿ ಲಕ್ಷ್ಮಣ್ ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಘಟನೆ ಸಂಬಂದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

 

Leave a Reply

Your email address will not be published. Required fields are marked *