ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಇತ್ತೀಚೆಗೆ ಕಾಡಾನೆ ದಾಳಿಯಿಂದ ಜೀವಹಾನಿ ಸಂಭವಿಸಿ ಜನರಿಂದ ಪ್ರತಿಭಟನೆ ವ್ಯಕ್ತವಾದ ಹಿನ್ನಲೆಯಲ್ಲಿ ಹಾಸನ ಜಿಲ್ಲೆ ಉಸ್ತುವಾರಿ ಸಚಿವರು ಹೇಳಿಕೆ ನೀಡಿ ಕಾಡಾನೆಗಳನ್ನು ಭದ್ರಾ ಅಭಯಾರಣ್ಯದ ಕಡೆಗೆ ಅಟ್ಟುವುದಾಗಿ ಹೇಳಿಕೆ ನೀಡಿದ್ದು, ಇದನ್ನು ರೈತ ಹಿತರಕ್ಷಣೆ ವೇದಿಕೆ ತೀವ್ರವಾಗಿ ವಿರೋಧಿಸಿದೆ.
ಮೂಡಿಗೆರೆ ರೈತ ಹಿತರಕ್ಷಣೆ ವೇದಿಕೆ ಅಧ್ಯಕ್ಷ ಬಿ.ಕೆ. ಲಕ್ಷ್ಮಣಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ಸುರೇಂದ್ರ ಹ್ಯಾರಗುಡ್ಡೆ ಈ ಕುರಿತು ಹೇಳಿಕೆ ನೀಡಿದ್ದು, ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಮತ್ತು ಕಾಡುಕೋಣ, ಕಾಡುಹಂದಿ, ಮಂಗಗಳು, ನವಿಲು ಇತರೆ ಎಲ್ಲಾ ರೀತಿಯ ಕಾಡು ಪ್ರಾಣಿಗಳು ರೈತರು ಬೆಳೆದ ಬೆಳೆಗಳನ್ನು ನಾಶಪಡಿಸುತ್ತಿವೆ. ಹಾಸನ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಯ ಕಡೆ ಕಾಡಾನೆಗಳನ್ನು ಅಟ್ಟಿದರೆ ಇವುಗಳ ಹಾವಳಿಯಿಂದ ರೈತಾಪಿ ಮತ್ತು ಕಾರ್ಮಿಕ ವರ್ಗದವರಿಗೆ ಬಹಳ ತೊಂದರೆಯಾಗುತ್ತದೆ.
ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಅಟ್ಟುವ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಲಕ ಹಾದುಹೋಗುವಾಗ ವ್ಯಾಪಕ ಹಾನಿ ಉಂಟುಮಾಡುತ್ತವೆ. ಈಗಾಗಲೇ ಭದ್ರಾ ಅಭಯಾರಣ್ಯದಲ್ಲಿ ಇರುವ ಆನೆಗಳು ಸುತ್ತಮುತ್ತಲ ಗ್ರಾಮಗಳಿಗೆ ಲಗ್ಗೆ ಇಟ್ಟು ಬೆಳೆಹಾನಿ, ಜೀವಹಾನಿ ಉಂಟುಮಾಡುತ್ತಿದ್ದು, ಮತ್ತೆ ಅಲ್ಲಿಗೆ ಕಾಡಾನೆ ಹಿಂಡುಗಳನ್ನು ಅಟ್ಟುವುದರಿಂದ ಅದರಿಂದ ಮತ್ತಷ್ಟು ಹಾನಿ ಸಂಭವಿಸುತ್ತದೆ. ಸರ್ಕಾರ ಈ ನಿರ್ಧಾರವನ್ನು ಕೂಡಲೇ ಬದಲಾವಣೆ ಮಾಡಿ ಕಾಡಾನೆಗಳನ್ನು ಸೆರೆಹಿಡಿದು ಸುರಕ್ಷಿತವಾದ ಇತರೆ ಅಭಯಾರಣ್ಯಗಳಿಗೆ ಸ್ಥಳಾಂತರ ಮಾಡಬೇಕಾಗಿ ಆಗ್ರಹಿಸುತ್ತೇವೆ. ಭದ್ರಾ ಅಭಯಾರಣ್ಯದ ಕಡೆಗೆ ಆನೆಗಳನ್ನು ಅಟ್ಟಲು ಮುಂದಾದರೆ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.


