ಜೀವನದಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಇಚ್ಛಾಶಕ್ತಿ, ಸಕಾರಾತ್ಮಕ ಚಿಂತನೆ ಹಾಗೂ ದೃಢ ಸಂಕಲ್ಪ ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬದುಕು ಕೇವಲ ಲೆಕ್ಕಾಚಾರಕ್ಕೆ ಸೀಮಿತವಾಗದೆ, ಸಮಾಜದ ಏಳಿಗೆ ಮತ್ತು ಸುಧಾರಣೆಯ ಆಶಯದೊಂದಿಗೆ ಸಾಗಿದಾಗ ಮಾತ್ರ ನಮ್ಮ ಬದುಕಿಗೂ ನಿಜವಾದ ಅರ್ಥ ದೊರೆಯುತ್ತದೆ. ರಾಜಕಾರಣಿಗಳು ಭಾಷಣ ಮಾಡುವ ಸಂದರ್ಭದಲ್ಲಿ ರೈತರನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಾರೆ. ಆದರೆ ರೈತರು ಸಂಕಷ್ಟಕ್ಕೆ ಸಿಲುಕಿದಾಗ ಅವರ ಸಮಸ್ಯೆಗಳನ್ನು ಪರಿಹರಿಸುವ ಭರವಸೆಗಳು ಮರೆತುಹೋಗುತ್ತವೆ. ರೈತರ ಬದುಕು ಹಸನಾಗಬೇಕಾದರೆ ಕೇವಲ ಭಾಷಣಗಳಲ್ಲಿ ರೈತರ ಪರ ಕಾಳಜಿ ವ್ಯಕ್ತಪಡಿಸುವುದಷ್ಟೇ ಸಾಲದು. ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಕೃಷಿಗೆ ಪೂರಕವಾದ ಅನುಕೂಲಕರ ವಾತಾವರಣ ನಿರ್ಮಿಸಿಕೊಡುವ ಜವಾಬ್ದಾರಿಯನ್ನು ಜನಪ್ರತಿನಿಧಿಗಳು ನಿಭಾಯಿಸಬೇಕೆಂದು ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕಿ ಡಾ.ಆರ್.ಎಸ್.ರೇಣುಕಾ ಮುಖ್ಯ ಭಾಷಣಕಾರರಾಗಿ ಮಾತನಾಡಿ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಹಕಾರ ಇಲಾಖೆಯು ಹೊಸ ತರಬೇತಿ ಆರಂಭಿಸಿದ್ದು, ಯುವಜನತೆ ಈ ಕ್ಷೇತ್ರದತ್ತ ಆಕರ್ಷಿತರಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕೃಷಿ ಕ್ಷೇತ್ರದಲ್ಲಿ ಸಾವಯವ ಕೃಷಿ ಹಾಗೂ ಹವಾಮಾನಕ್ಕೆ ಅನುಗುಣವಾದ ಕೃಷಿ ಪದ್ಧತಿಗೆ ಹೆಚ್ಚಿನ ಉತ್ತೇಜನ ನೀಡಬೇಕು. ಪ್ರಕೃತಿ ಸಂರಕ್ಷಣೆ, ಪ್ರಾಣಿ ಸಂಕುಲ ಮತ್ತು ಜೀವವೈವಿಧ್ಯದ ರಕ್ಷಣೆಯಲ್ಲಿಯೂ ಸಹಕಾರ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬೇಕೆಂದು ಹೇಳಿದರು. ಸಹಕಾರ ಕ್ಷೇತ್ರದಲ್ಲಿ ಯುವಜನರ ಪಾಲ್ಗೊಳ್ಳುವಿಕೆ ಹೆಚ್ಚಿಸುವುದರ ಜೊತೆಗೆ ಪರಿಸರ ಸ್ನೇಹಿ ತಂತ್ರಜ್ಞಾನ, ಗಿಡ ನೆಡುವಿಕೆ, ಜಲ ಸಂರಕ್ಷಣೆ, ಇಂಧನ ಉಳಿತಾಯ ಮತ್ತು ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಬೇಕು. ಜಾತಿ, ಧರ್ಮ, ಭಾಷೆ ಭೇದ ಮರೆತು ಶಾಂತಿ, ಸಮಾನತೆ ಹಾಗೂ ಸಹಬಾಳ್ವೆಯ ಮೌಲ್ಯಗಳನ್ನು ಬೆಳೆಸುವ ಮೂಲಕ ಸಹಕಾರ ಸಂಸ್ಥೆಗಳು ಸಾಮಾಜಿಕ ಪರಿವರ್ತನೆಯ ಕೇಂದ್ರಗಳಾಗಬೇಕು. ಸಹಕಾರ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ, ಸಮಾನ ಪ್ರಾತಿನಿಧ್ಯ ಹಾಗೂ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಬೇಕೆಂದು ಹೇಳಿದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ರೈತರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಹಕಾರಿ ಸಂಸ್ಥೆಗಳು ಮಹತ್ವದ ಕೊಡುಗೆ ನೀಡುತ್ತಿವೆ. ಸಂಸ್ಥೆಗಳು ರೈತರ ಸಂಕಷ್ಟಗಳಿಗೆ ಸ್ಪಂದಿಸಿ, ಅವರ ಆರ್ಥಿಕ ಮತ್ತು ಸಾಮಾಜಿಕ ಬದುಕು ಸುಧಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಮಾಕೋನಹಳ್ಳಿ, ಬಣಕಲ್, ಇಡಕಣಿ ಸಹಕಾರ ಸಂಸ್ಥೆಯಂತೆ ಎಲ್ಲಾ ಸಹಕಾರಿ ಸಂಸ್ಥೆಗಳು ಮುಂಚೂಣಿಯಲ್ಲಿ ಸಾಗಬೇಕೆಂದು ಹಾರೈಸಿದರು.
ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಮತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎನ್.ಅಶ್ವಥ್ ಮಾತನಾಡಿ, ನಮ್ಮ ಸಂಸ್ಥೆ ಆರಂಭದಿಂದಲೂ ಉತ್ತಮವಾಗಿ ಸಾಗುತ್ತಿದೆ. 86 ಲಕ್ಷ ರೂ ದೇಣಿಗೆ ಮೂಲಕ ಸಂಗ್ರಹಿಸಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ರೈತರಿಗೆ ಅಗತ್ಯವಾದ ಗೊಬ್ಬರ, ಕೃಷಿ ಯಾಂತ್ರೀಕರಣ, ಸಾಲ ಸೌಲಭ್ಯ ಸೇರಿದಂತೆ ಎಲ್ಲಾ ಬಗೆಯ ಸವಲತ್ತು ನೀಡಲಾಗುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ, ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ.ದಿವಾಕರ್ ವಹಿಸಿದ್ದರು.
ಟಿಎಪಿಸಿಎಂಸ್ ಅಧ್ಯಕ್ಷ ಎಂ.ಎಲ್.ಕಲ್ಲೇಶ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ಶ್ರೀಮತಿ ಭಾರತಿ ರವಿ, ಮಾಕೋನಹಳ್ಳಿ ಸಹಕಾರ ಸಂಘದ ಉಪಾಧ್ಯಕ್ಷ ಮೂರ್ತಿ ಪಿ.ಎಸ್. ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಕೆ.ರಾಜಮ್ಮ, ಓ.ಎಸ್.ಗೋಪಾಲಗೌಡ, ಬಿ.ಎಸ್.ನಾರಾಯಣಗೌಡ, ರಾಜೇಂದ್ರ ಪ್ರಸಾಧ್, ಎಂ.ಎಸ್.ದಯಾನಂದ್, ಡಿ.ಬಿ.ಜಯಪ್ರಕಾಶ್, ಪುಟ್ಟಮ್ಮ, ಭಾನುಮತಿ, ಎಚ್.ಕೆ.ಪೂರ್ಣೇಶ್, ಎಚ್.ಟಿ.ಪ್ರಸನ್ನ, ಎಂ.ಜಿ.ಪ್ರವೀಣ್, ಎಂ.ಎಸ್.ಪ್ರಸನ್ನ, ಡಿ.ಜಿ.ರಂಜಿತ್ ಸೇರಿದಂತೆ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಸಿಇಓಗಳು, ವಿವಿಧ ರಾಜಕೀಯ ಪಕ್ಷಗಳ ಮತ್ತು ಸಂಘಸಂಸ್ಥೆಗಳ ಅಧ್ಯಕ್ಷರು, ಮಾಕೋನಹಳ್ಳಿ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರುಗಳು, ಸಿಇಓ, ಸಿಬ್ಬಂದಿವರ್ಗದವರು ಮತ್ತಿತರರಿದ್ದರು.



