ಕ್ಷೇತ್ರದ ಅಭಿವೃದ್ಧಿ ಹಾಗೂ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕೈಗೆತ್ತಿಕೊಂಡಿರುವ ಮೂಗುತಿಹಳ್ಳಿ–ಮೂಡಿಗೆರೆ ಹ್ಯಾಂಡ್ ಪೋಸ್ಟ್ ರಸ್ತೆ ವಿಸ್ತರಣೆ ಮತ್ತು ಶಿಶಿಲಾ–ಬೈರಾಪುರ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಯಾರೂ ಅಡ್ಡಿಪಡಿಸಬಾರದು ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮನವಿ ಮಾಡಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಗುತಿಹಳ್ಳಿಯಿಂದ ಮೂಡಿಗೆರೆ ಹ್ಯಾಂಡ್ ಪೋಸ್ಟ್ ವರೆಗಿನ ರಸ್ತೆ ವಿಸ್ತರಣೆಗೆ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಭೂಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ. ಕಾಮಗಾರಿಯ ಭಾಗವಾಗಿ ಮರಗಳ ತೆರವು ಕಾರ್ಯವೂ ನಡೆದಿದೆ. ಸ್ಥಳಾಂತರಿಸಲು ಸಾಧ್ಯವಿರುವ ಮರಗಳನ್ನು ಸ್ಥಳಾಂತರಿಸಿ, ಉಳಿದ ಮರಗಳನ್ನು ತೆರವುಗೊಳಿಸಲಾಗಿದೆ. ಪರಿಸರ ಸಂರಕ್ಷಣೆ ಜತೆಗೆ ಭವಿಷ್ಯದ ಅಗತ್ಯ ಹಾಗೂ ಸುಗಮ ಸಂಚಾರಕ್ಕೆ ರಸ್ತೆ ಅಭಿವೃದ್ಧಿಯೂ ಅನಿವಾರ್ಯವಾಗಿದೆ. ರಸ್ತೆ ವಿಸ್ತರಣೆಗಾಗಿ ಬಾಕಿ ಉಳಿದಿರುವ ಕೆಲಸ ಚುರುಕುಗೊಳಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದು ಹೇಳಿದರು.
ಬೇಲೂರು ಭಾಗದಿಂದ ಮೂಡಿಗೆರೆ ಮಾರ್ಗವಾಗಿ ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಅಟ್ಟುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ನಿರ್ಧಾರ ಅವೈಜ್ಞಾನಿಕವಾಗಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಹೇಳಿಕೆ ನೀಡಿದ ದಿನವೇ ತಾನು ವಿರೋಧ ವ್ಯಕ್ತಪಡಿಸಿದ್ದೆ. ಕಾಡಾನೆಗಳ ಸ್ಥಳಾಂತರಕ್ಕೆ ಕೇಂದ್ರ ಸರಕಾರದ ಸಹಕಾರ ಅಗತ್ಯವಿದ್ದರೆ ಕೇಳುವಂತೆ ತಿಳಿಸಿದ್ದೆ. ಆದರೆ, ಆಗ ನನ್ನ ಸಲಹೆಗೆ ಗಮನ ನೀಡದೆ ಈಗ ಸಮಸ್ಯೆ ಗಂಭೀರಗೊಳಿಸಿಕೊಂಡು ಸಭೆಗೆ ಆಹ್ವಾನಿಸಲು ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಶಿಲಾ–ಬೈರಾಪುರ ರಸ್ತೆ ನಿರ್ಮಾಣಕ್ಕೂ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದರೂ, ಈ ಭಾಗದ ಜನರು ರಸ್ತೆ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದಾರೆ. ಸ್ಥಳೀಯರ ಅಗತ್ಯಗಳನ್ನು ಪರಿಗಣಿಸಿ ಕಾಮಗಾರಿಯಲ್ಲಿರುವ ಸಣ್ಣಪುಟ್ಟ ತಾಂತ್ರಿಕ ದೋಷವನ್ನು ಸರಿಪಡಿಸಿ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಜನರ ಅನುಕೂಲಕ್ಕಾಗಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ವಿಧಾನಪರಿಷತ್ ಮಾಜಿ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಬಿಜೆಪಿ ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಮುಖಂಡರಾದ ದೀಪಕ್ ದೊಡ್ಡಯ್ಯ, ಜೆ.ಎಸ್.ರಘು, ಪ್ರಮೋದ್ ದುಂಡುಗ, ಕೆ.ಸಿ.ರತನ್, ಪ್ರಶಾಂತ್ ಬಿಳಗುಳ, ಧನಿಕ್ ಕೋಡದಿಣ್ಣೆ, ವಿಭಾ ಸುಶ್ಮಾ, ಪಂಚಾಕ್ಷರಿ, ರಂಗನಾಥ್, ಶಶಿ ಉಪಸ್ಥಿತರಿದ್ದರು.


