ಕಾರ್ ಬೈಲ್ ಗ್ರಾಮದ ಸುಪ್ರೀತ್ ಎಂಬುವವರ ತೋಟವನ್ನು ಕಾಡಾನೆಗಳು ಸಂಪೂರ್ಣ ನಾಶಮಾಡಿವೆ
ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ನಡುವೆ ನಡೆಯುತ್ತಿರುವ ಕಾಡಾನೆ ಜಟಾಪಟಿಯಲ್ಲಿ ಮೂಡಿಗೆರೆ ತಾಲ್ಲೂಕಿನ ಕೆಲ ಗ್ರಾಮಗಳ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳೀ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಪ್ರಮುಖವಾಗಿ ಮಾಕೋನಹಳ್ಳಿ ಸಮೀಪದ ಕಾರಬೈಲ್ ಗ್ರಾಮದಲ್ಲಿ 20ಕ್ಕೂ ಹೆಚ್ಚು ಕಾಡಾನೆ ಹಿಂಡು ಗ್ರಾಮದ ರೈತರ ತೋಟ ಗದ್ದೆಗಳನ್ನು ದ್ವಂಸ ಮಾಡುತ್ತಿವೆ.
ಸರ್ಕಾರದ ಒಂದು ತಪ್ಪು ನಿರ್ಧಾರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇರೆ ಬೇಕಾಗಿಲ್ಲಾ. ಹಾಸನ ಜಿಲ್ಲೆಯ ಉಸ್ತುವಾರಿ ಸಚಿವ ಶಿವಲಿಂಗೇಗೌಡರು ತಮ್ಮ ಜಿಲ್ಲೆಯ ರೈತಾಪಿ ವರ್ಗ ಮತ್ತು ಸಾರ್ವಜನಿಕರು ತೊಂದರೆ ಯಾಗದಿರಲಿ ಎಂದು ಆನೆಗಳನ್ನು ಡ್ರೈವ್ ಮಾಡುವ ಮೂಲಕ ಆಪರೇಷನ್ ಗಜ ದ ಹೆಸರಿನಲ್ಲಿ ೫೬ ಕ್ಕೂ ಅಧಿಕ ಆನೆಗಳನ್ನು ಏಕಾಏಕಿ ಮಲೆನಾಡಿನತ್ತ ಓಡಿಸುವುದರ ಮೂಲಕ ತಣ್ಣಗೆ ಕುಳಿತರು. ಆದರೆ ಮಲೆನಾಡಿಗೆ ಎಂಟ್ರಿ ಆದ ಆನೆಗಳ ಹಿಂಡು ಮೂರು ಗುಂಪುಗಳಾಗಿ ಚದುರಿ ಮಾಕೋನಹಳ್ಲಿ ಭಾಗದಲ್ಲಿ ಠಿಕಾಣಿ ಹೂಡಿವೆ. ಅಲ್ಲಿರುವ ತೋಟಗಳನ್ನು ಮನಬಂದಂತೆ ನಾಶ ಮಾಡುತ್ತಿವೆ.
ಕಾರಬೈಲ್ ನಲ್ಲಿ ಕಳೆದ ಹಲವು ದಶಕಗಳಿಂದ ಪ್ರಹ್ಲಾದ ಎಂಬ ರೈತ ತನ್ನ ಎರಡು ಎಕರೆ ಜಮೀನಿನನಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆದು ಮಕ್ಕಳಂತೆ ಪೋಷಿಸಿ ತನ್ನ ಕುಂಟುಂಬದ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದರು . ಪ್ರಹ್ಲಾದ್ ಅವರ ೨ ಎಕರೆ ತೋಟದಲ್ಲಿದ್ದ ಕಾಫಿ, ಅಡಿಕೆ ಸಂಪೂರ್ಣ ಹಾಳು ಗೆಡುವಿದ್ದು ಸಂಪೂರ್ಣ ನಾಶಮಾಡಿದೆ. ಇನ್ನು ಪ್ರಹ್ಲಾದ ಅವರು ಬೆಳೆ ಬೆಳೆಯ ಬೇಕೆಂದರೆ ಕನಿಷ್ಟ 20 ವರ್ಷಗಳ ಕಾಲ ಕಾಯಬೇಕಾಗಿದೆ. ಪ್ರಹ್ಲಾದ್ ಅವರು ಮೊದಲೇ ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಇದೇ ತೋಟವನ್ನು ನಂಬಿ ಅವರ ಚಿಕಿತ್ಸೆ, ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ನಡೆಯಬೇಕಾಗಿದೆ. ಈಗ ಆನೆಗಳ ಹಾವಳಿಯಿಂದ ಅವರ ಕುಟುಂಬ ಎಲ್ಲಾ ಕಳೆದುಕೊಂಡು ಬೀದಿಗೆ ಬಿದ್ದಿದೆ.

ಪ್ರಹ್ಲಾದ್ ಅವರು ಇದರಿಂದ ತೀವ್ರವಾಗಿ ಮನನೊಂದು ನಾನು ತೋಟದಲ್ಲಿಯೇ ಇರುತ್ತೇನೆ. ಮನೆಗೆ ಬರುವುದಿಲ್ಲ. ನನ್ನನ್ನು ಆನೆ ತುಳಿದು ಸಾಯಿಸಲಿ, ಕಷ್ಟಪಟ್ಟು ಹತ್ತಾರು ವರ್ಷದಿಂದ ಸಾಕಿದ್ದ ನನ್ನ ಬೆಳೆಗಳೆಲ್ಲಾ ನಾಶವಾಗಿವೆ. ನಾನು ಮುಂದೆ ಹೇಗೆ ಜೀವನ ನಡೆಸುವುದು, ನನಗೆ ಸಾವೊಂದೇ ದಾರಿ ಎಂದು ಅಳುತ್ತಾ ಕುಳಿತ್ತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಮಾಕೋನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎನ್.ಅಶ್ವತ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಅಜಿತ್ ಕೆ.ಜಿ. ಗ್ರಾಮಸ್ಥರುಗಳಾದ ಅನಿಲ್, ಶೇಷೇಗೌಡ, ಗಿಡ್ಡೆಗೌಡ, ಸೇರಿದಂತೆ ಅನೇಕರು ಪ್ರಹ್ಲಾದ ಅವರಿಗೆ ಸಮಾಧಾನ ಹೇಳಿ ಮನೆಗೆ ಕರೆತಂದಿದ್ದಾರೆ.
ಇದು ಪ್ರಹ್ಲಾದ್ ಒಬ್ಬರ ಗೋಳಲ್ಲ ಇಡೀ ಈ ಭಾಗದಲ್ಲಿ ಹತ್ತಾರು ರೈತರು ಇದೇ ರೀತಿಯ ನಷ್ಟಕ್ಕೆ ಒಳಗಾಗಿದ್ದಾರೆ.
ಕಾರಬೈಲ್ ಗ್ರಾಮದ ಸುಪ್ರೀತ್ ಎಂಬುವವರ ತೋಟವನ್ನು ಕಾಡಾನೆಗಳು ಸಂಪೂರ್ಣ ನಾಶಮಾಡಿವೆ. ಇಲ್ಲಿನ ರೈತರು ತೋಟಗದ್ದೆಗಳಿಗೆ ತೆರಳಲು ಭಯಪಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ.
ಕಾಡಾನೆಗಳನ್ನು ಕಾರ್ಬೈಲ್ ನಲ್ಲಿ ಕೂಡಿ ಹಾಕಿ ರೈತರಿಗೆ ನಷ್ಟವುಂಟುಮಾಡುತ್ತಿರುವ ಅರಣ್ಯ ಇಲಾಖೆಯ ಕ್ರಮದ ವಿರುದ್ಧ ಈ ಭಾಗದ ರೈತರು ಆಕ್ರೋಶಿತರಾಗಿದ್ದು, ಶನಿವಾರ ಮಾಕೋನಹಳ್ಳಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.


