ಕಾಡಾನೆಗಳಿಂದ ಅಪಾರ ಹಾನಿ ಅನುಭವಿಸುತ್ತಿರುವ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಮತ್ತು ನಂದಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಿರಾರು ಸಾರ್ವಜನಿಕರು ಪ್ರತಿಭಟನೆ ಆರಂಭಿಸಿದ್ದಾರೆ.
ಮಾಕೋನಹಳ್ಳಿ ಮುಖ್ಯರಸ್ತೆಯಲ್ಲಿ ಅಹೋ ರಾತ್ರಿ ಧರಣಿ ಆರಂಭಿಸಿರುವ ಪ್ರತಿಭಟನಾಕಾರರು ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ಮೂಡಿಗೆರೆ ಗೆಂಡೆಹಳ್ಳಿ ಬೇಲೂರು ಮುಖ್ಯ ರಸ್ತೆಯನ್ನು ಬಂದ್ ಮಾಡಿ ರಸ್ತೆಯಲ್ಲಿಯೇ ಧರಣಿ ಕುಳಿತಿರುವ ರೈತರು ಸ್ಥಳಕ್ಕೆ ಶಾಸಕರು ಉಸ್ತುವಾರಿ ಸಚಿವರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬರಬೇಕು ಎಂದು ಕೊಟ್ಟು ಹಿಡಿದಿದ್ದಾರೆ.
ಬೇಲೂರು ಮತ್ತು ಮೂಡಿಗೆರೆ ಗಡಿ ಭಾಗದಲ್ಲಿರುವ ಮಾಕೋನಹಳ್ಳಿ, ನಂದೀಪುರ ಸುತ್ತಮುತ್ತಲ ಗ್ರಾಮಗಳಿಗೆ ಹತ್ತಾರು ಆನೆಗಳು ಲಗ್ಗೆ ಇಟ್ಟಿದ್ದು ಇಲ್ಲಿನ ರೈತರ ಕಾಫಿ ಅಡಿಕೆ ಕಾಳುಮೆಣಸು ಭತ್ತ ಮುಂತಾದ ಬೆಳೆಗಳನ್ನು ನಾಶಪಡಿಸುತ್ತಿವೆ.
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಈ ಭಾಗದ ರೈತರಿಗೆ ಅಪಾರ ಹಾನಿ ಉಂಟು ಮಾಡುತ್ತಿವೆ. ಕೃಷಿಕರು ಮತ್ತು ಕಾರ್ಮಿಕರು ತಮ್ಮ ತೋಟಗಳಿಗೆ ಹೋಗಲು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕಾಡಾನೆ ದಾಳಿಯಿಂದ ಬೆಳೆಯನ್ನು ಕಳೆದುಕೊಂಡಿರುವ ಹತಾಶ ರೈತರು ತಮ್ಮನ್ನು ಕಾಡಾನೆ ತುಳಿದು ಸಾಯಿಸಲಿ ನಮ್ಮ ಬೆಳೆ ಹೋದಮೇಲೆ ಬದುಕಿದ್ದು ಏನು ಪ್ರಯೋಜನ ಎಂದು ತೋಟದಲ್ಲಿಯೇ ಕುಳಿತು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ
ಮಾಕೋನಹಳ್ಳಿ ವೃತ್ತದಲ್ಲಿ ಸುತ್ತಮುತ್ತಲ ಗ್ರಾಮಗಳ ಜನರು ಮಾತ್ರವಲ್ಲದೆ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿರುವ ರೈತರು, ರೈತ ಸಂಘ ಬೆಳೆಗಾರರ ಸಂಘ ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಪ್ರತಿಭಟನೆಯ ಸ್ಥಳಕ್ಕೆ ಶಾಸಕರು, ಸಚಿವರು, ಹಿರಿಯ ಅಧಿಕಾರಿಗಳು ಬರಬೇಕು ಮತ್ತು ಬೆಳೆ ಹಾನಿ ಅನುಭವಿಸಿರುವ ರೈತರಿಗೆ ತಕ್ಷಣ ಪರಿಹಾರದ ಚೆಕ್ ವಿತರಿಸಬೇಕು ಮತ್ತು ಕಾಡಾನೆ ಹಾವಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಒತ್ತಾಯಿಸಿರುವ ಪ್ರತಿಭಟನೆಕಾರರು ತಮ್ಮ ಬೇಡಿಕೆಗಳು ಈಡೇರುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ.

ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು ಮೂಡಿಗೆರೆ ಸರ್ಕಲ್ ಇನ್ಸ್ಪೆಕ್ಟರ್ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ, ಜೊತೆಗೆ ರಿಸರ್ವ್ ಪೊಲೀಸ್ ಪಡೆಯನ್ನು ನಿಯೋಜಿಸಿದ್ದು ಯಾವುದೇ ಅಹಿತಕರ ಘಟನೆ ನಡೆದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಪ್ರತಿಭಟನೆಯಲ್ಲಿ ಸ್ಥಳೀಯ ವಿವಿಧ ಪಕ್ಷಗಳ ಮತ್ತು ಸಂಘಟನೆಗಳ ಮುಖಂಡರು ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತು ಸ್ಥಳೀಯ ವಿವಿಧ ಮಾಧ್ಯಮ ಸಂಸ್ಥೆಗಳು, ಮಾಧ್ಯಮ ಪ್ರತಿನಿಧಿಗಳು ಸ್ಥಳದಿಂದಲೇ ನೇರವಾಗಿ ಸುದ್ದಿ ಪ್ರಸಾರ ಮಾಡುತ್ತಿದ್ದು ಘಟನೆಯ ತೀವ್ರತೆಯನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ನಡೆಸಲಾಗುತ್ತಿದೆ.


