ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ಕಾಡಾನೆ ಹಾವಳಿ ಖಂಡಿಸಿ , ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ಪ್ರಾರಂಭಿಸಿದ್ದ ರಸ್ತೆ ತಡೆ ಮತ್ತು ಅಹೋರಾತ್ರಿ ಪ್ರತಿಭಟನೆ ಸ್ಥಳಕ್ಕೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಹಾಗೂ ಎಂಎಲ್ಸಿ ಗಾಯತ್ರಿ ಶಾಂತೇಗೌಡ ಭೇಟಿ ನೀಡಿ ಸೂಕ್ತ ಕ್ರಮದ ಭರವಸೆಯನ್ನು ನೀಡಿದ ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ.
ಬೇಲೂರು ಭಾಗದಿಂದ ಅಟ್ಟಿರುವ ಸುಮಾರು 30ಕ್ಕೂ ಅಧಿಕ ಕಾಡಾನೆಗಳ ಹಿಂಡು ಮಾಕೋನಹಳ್ಳಿ ಮತ್ತು ನಂದೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೀಡುಬಿಟ್ಟು ಅಪಾರ ಹಾನಿ ಉಂಟುಮಾಡುತ್ತಿವೆ. ಇದರಿಂದ ಮನನೊಂದ ಸ್ಥಳೀಯ ರೈತರು, ಸಾರ್ವಜನಿಕರು ಮಾಕೋನಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಅಹೋರಾತ್ರಿ ಪ್ರತಿಭಟನಾ ಧರಣಿ ಆರಂಭಿಸಿದ್ದರು.
ಮೂಡಿಗೆರೆ ಗೆಂಡೆಹಳ್ಳಿ ಬೇಲೂರು ಮುಖ್ಯ ರಸ್ತೆಯನ್ನು ಬಂದ್ ಮಾಡಿ ರಸ್ತೆಯಲ್ಲಿಯೇ ಧರಣಿ ಕುಳಿತು ರೈತರು ಸ್ಥಳಕ್ಕೆ ಶಾಸಕರು ಉಸ್ತುವಾರಿ ಸಚಿವರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬರಬೇಕು ಎಂದು ಕೊಟ್ಟು ಹಿಡಿದಿದ್ದರು.
ಬೇಲೂರು ಮತ್ತು ಮೂಡಿಗೆರೆ ಗಡಿ ಭಾಗದಲ್ಲಿರುವ ಮಾಕೋನಹಳ್ಳಿ, ನಂದೀಪುರ ಸುತ್ತಮುತ್ತಲ ಗ್ರಾಮಗಳಿಗೆ ಹತ್ತಾರು ಆನೆಗಳು ಲಗ್ಗೆ ಇಟ್ಟಿದ್ದು ಇಲ್ಲಿನ ರೈತರ ಕಾಫಿ ಅಡಿಕೆ ಕಾಳುಮೆಣಸು ಭತ್ತ ಮುಂತಾದ ಬೆಳೆಗಳನ್ನು ನಾಶಪಡಿಸುತ್ತಿವೆ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಈ ಭಾಗದ ರೈತರಿಗೆ ಅಪಾರ ಹಾನಿ ಉಂಟು ಮಾಡುತ್ತಿವೆ. ಕೃಷಿಕರು ಮತ್ತು ಕಾರ್ಮಿಕರು ತಮ್ಮ ತೋಟಗಳಿಗೆ ಹೋಗಲು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕಾಡಾನೆ ದಾಳಿಯಿಂದ ಬೆಳೆಯನ್ನು ಕಳೆದುಕೊಂಡಿರುವ ಹತಾಶ ರೈತರು ತಮ್ಮನ್ನು ಕಾಡಾನೆ ತುಳಿದು ಸಾಯಿಸಲಿ ನಮ್ಮ ಬೆಳೆ ಹೋದಮೇಲೆ ಬದುಕಿದ್ದು ಏನು ಪ್ರಯೋಜನ ಎಂದು ತೋಟದಲ್ಲಿಯೇ ಕುಳಿತು ಪ್ರತಿಭಟನೆ ವ್ಯಕ್ತಪಡಿಸಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ ಕಾರ್ ಬೈಲ್ ಗ್ರಾಮದ ಪ್ರಹ್ಲಾದ್ ಎಂಬ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಮಾಕೋನಹಳ್ಳಿ ವೃತ್ತದಲ್ಲಿ ಸುತ್ತಮುತ್ತಲ ಗ್ರಾಮಗಳ ಜನರು ಮಾತ್ರವಲ್ಲದೆ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು, ರೈತ ಸಂಘ ಬೆಳೆಗಾರರ ಸಂಘ ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಯ ಸ್ಥಳಕ್ಕೆ ಶಾಸಕರು, ಸಚಿವರು, ಹಿರಿಯ ಅಧಿಕಾರಿಗಳು ಬರಬೇಕು ಮತ್ತು ಬೆಳೆ ಹಾನಿ ಅನುಭವಿಸಿರುವ ರೈತರಿಗೆ ತಕ್ಷಣ ಪರಿಹಾರದ ಚೆಕ್ ವಿತರಿಸಬೇಕು ಮತ್ತು ಕಾಡಾನೆ ಹಾವಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದ್ದ ಪ್ರತಿಭಟನೆಕಾರರು ತಮ್ಮ ಬೇಡಿಕೆಗಳು ಈಡೇರುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದರು.

ಪ್ರತಿಭಟನಾ ಸ್ಥಳಕ್ಕೆ ಆರಂಭದಲ್ಲಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ಅವರು ಆಗಮಿಸಿ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದರು. ಕಾಡಾನೆ ಹಾವಳಿಯ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಶಾಶ್ವತ ಪರಿಹಾರಕ್ಕೆ ಯತ್ನಿಸುವುದಾಗಿ ಭರವಸೆ ನೀಡಿದರು.
ಮಧ್ಯಾಹ್ನದ ನಂತರ ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಶಾಸಕಿ ನಯನಾ ಮೋಟಮ್ಮ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ನಾನು ಸಹ ಕ್ಷೇತ್ರದ ಜನರ ನೋವಿನ ಧ್ವನಿಯನ್ನು ಸರ್ಕಾರದ ಮಟ್ಟದಲ್ಲಿ ಪ್ರತಿಧ್ವನಿಸಲು ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದೆ. ಬೇಲೂರು ಕಡೆಯಿಂದ ಏಕಾಏಕಿ ನಮ್ಮ ಗಮನಕ್ಕೆ ಬಾರದೇ ಕಾಡಾನೆಗಳನ್ನು ಮೂಡಿಗೆರೆ, ಚಿಕ್ಕಮಗಳೂರು ಮೂಲಕ ಭದ್ರ ಅರಣ್ಯಕ್ಕೆ ಅಟ್ಟಲು ಮುಂದಾದಾಗ ಜಿಲ್ಲೆಯ ಶಾಸಕರು ತೀವ್ರ ಪ್ರತಿರೋಧ ತೋರಿದ್ದೇವೆ. ಇದರಿಂದ ಭದ್ರಾ ಅರಣ್ಯದ ಕಡೆಗೆ ಆನೆಗಳನ್ನು ಅಟ್ಟುವ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ.
ಈಗ ಮಾಕೋನಹಳ್ಳಿ ಭಾಗದಲ್ಲಿ ಕಾಡಾನೆಗಳು ಬೀಟುಬಿಟ್ಟು ಅಪಾರ ಹಾನಿ ಉಂಟುಮಾಡಿವೆ. ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ನಾನು ಒತ್ತಾಯಿಸುತ್ತೇನೆ. ಈಗ ಕಾಫಿ ಅಡಿಕೆ ಮುಂತಾದ ಬೆಳೆಗಳಿಗೆ ಇರುವ ಪರಿಹಾರದ ಮೊತ್ತವನ್ನು ಒಂದಕ್ಕೆ ಹತ್ತು ಪಟ್ಟು ಹೆಚ್ಚಿಸಬೇಕು ಎಂದು ಬೇಡಿಕೆಯಿದ್ದು, ಅದನ್ನು ಸರ್ಕಾರದ ಗಮನಕ್ಕೆ ತರುತ್ತೇನೆ.
ನವೆಂಬರ್ 30ರಂದು ಮುಖ್ಯಮಂತ್ರಿಗಳು ಸಭೆ ಕರೆದಿದ್ದು ಅಲ್ಲಿ ನಮ್ಮ ಕ್ಷೇತ್ರದ ರೈತರ ಸಮಸ್ಯೆಯನ್ನು ಸಮರ್ಥವಾಗಿ ಮಂಡಿಸಿ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.
ಕಾಡಾನೆ ಸಮಸ್ಯೆ ಹಲವು ವರ್ಷಗಳಿಂದ ಇದೆ. ಇದರಲ್ಲಿ ಯಾವುದೇ ರಾಜಕೀಯ ಮಾಡಬಾರದು, ಎಲ್ಲರು ಒಟ್ಟಾಗಿ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸಬೇಕು. ಇದಕ್ಕಾಗಿ ಎಲ್ಲರ ಬೆಂಬಲ ಅಗತ್ಯ ಎಂದರು.
ಶಾಸಕಿಯವರು ನೀಡಿದ ಭರವಸೆಯ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದೆಗೆದುಕೊಳ್ಳಲು ಸ್ಥಳೀಯರ ಒಮ್ಮತದ ತೀರ್ಮಾನಕ್ಕೆ ಬಂದರು.
ಈ ಸಂದರ್ಭದಲ್ಲಿ ಮಾಜಿ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಸೇರಿದಂತೆ ವಿವಿಧ ಪಕ್ಷಗಳ, ಬೆಳೆಗಾರರ ಸಂಘ, ರೈತ ಸಂಘದ ಮುಖಂಡರುಗಳು, ಸ್ಥಳೀಯ ಗ್ರಾಮಸ್ಥರು , ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


