ಇದೇ ಫೆಬ್ರುವರಿ 4ರಂದು ಕಂದಾಯ ಸಚಿವರಾದ ಆರ್.ಅಶೋಕ್ ರವರು ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದಾರೆ. ಅಂದು ಎ.ಐ.ಟಿ. ಕಾಲೇಜು ಅವರಣದಲ್ಲಿ ಬೆಳೆಗಾರರ ಸಂಘಟನೆಗಳ ವತಿಯಿಂದ ಅವರಿಗೆ ಆಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಒತ್ತುವರಿ ಮಾಡಿರುವ ರೈತರಿಂದ ಲೀಸ್ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಕಿಸಾನ್ ಮೋರ್ಚಾ ಸದಸ್ಯ ದಿನೇಶ್ ದೇವರುಂದ ತಿಳಿಸಿದ್ದಾರೆ.
ಅವರು ಇಂದು ಮೂಡಿಗೆರೆ ಬಿ.ಜೆ.ಪಿ. ಕಛೇರಿಯಲ್ಲಿ ಕಾರ್ಯಕರ್ತರ ಸಭೆಯ ನಂತರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಸರ್ಕಾರಿ ಜಮೀನು ಸಾಗುವಳಿ ಮಾಡಿ ತೋಟಮಾಡಿದ್ದ ರೈತರನ್ನು ಭೂಗಳ್ಳರಂತೆ ಬಿಂಬಿಸಲಾಗುತ್ತಿತ್ತು. ಹಾಲಿ ರಾಜ್ಯ ಸರ್ಕಾರ ಕಾಫಿ ಬೆಳೆಯುವ ಪ್ರದೇಶದಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು ಲೀಸ್ ಗೆ ನೀಡಲು ತೀರ್ಮಾನ ಕೈಗೊಂಡಿದೆ. ಇದರಿಂದ ಮಲೆನಾಡು ಭಾಗದ ಸಾವಿರಾರು ರೈತರಿಗೆ ಅನುಕೂಲವಾಗಿದೆ.
ಫೆಬ್ರುವರಿ 4ರಂದು ಚಿಕ್ಕಮಗಳೂರು ಎ.ಐ.ಟಿ. ಕಾಲೇಜು ಅವರಣದಲ್ಲಿ ನಡೆಯುವ ಅಭಿನಂದನಾ ಸಮಾರಂಭದ ಸಂದರ್ಭದಲ್ಲಿ ಬೆಳೆಗಾರರ ಸಂಘಟನೆಗಳ ವತಿಯಿಂದ ಹೋಬಳಿವಾರು ಪ್ರತ್ಯೇಕ ಕೌಂಟರ್ ತೆರೆದು ಒತ್ತುವರಿದಾರ ರೈತರಿಂದ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಸ್ಥಳದಲ್ಲಿಯೇ ಅರ್ಜಿ ಫಾರಂ ನೀಡಲಾಗುವುದು, ಅರ್ಜಿ ನೀಡುವ ಬೆಳೆಗಾರರು ಒತ್ತುವರಿ ಮಾಡಿರುವ ಜಮೀನಿನ ಸರ್ವೇ ನಂಬರ್, ವಿಳಾಸ, ಪಾಸ್‍ಪೋರ್ಟ್ ಅಳತೆಯ ಪೋಟೋ ದೊಂದಿಗೆ ಅರ್ಜಿ ಶುಲ್ಕ ರೂ. 100 ನೀಡಿ ಸ್ಥಳದಲ್ಲಿಯೇ ಅರ್ಜಿ ಸಲ್ಲಿಸಬಹುದು.
ಬೆಳೆಗಾರರು ಆಯಾ ಹೋಬಳಿ ಕೌಂಟರ್ ಗಳಲ್ಲಿ ತಮ್ಮ ಅರ್ಜಿ ಸಲ್ಲಿಸಬಹುದಾಗಿದೆ ಎಂದು ದಿನೇಶ್ ದೇವರುಂದ ಮಾಹಿತಿ ನೀಡಿದ್ದಾರೆ.


