ಇತ್ತೀಚೆಗೆ ರಾಜ್ಯ ಸರ್ಕಾರವು ರಾಜ್ಯದಲ್ಲಿ ಸುಮಾರು 60ಕ್ಕೂ ಹೆಚ್ಚಿನ ತಹಸೀಲ್ದಾರ್ ಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿದೆ.
ಅದರಂತೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಕಳೆದ ಒಂದೂವರೆ ವರ್ಷದಿಂದ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನಾಗರಾಜು ಅವರು ವರ್ಗಾವಣೆ ಆಗಿದ್ದಾರೆ. ಅವರಿಗೆ ಇನ್ನೂ ಸ್ಥಳ ನಿಯೋಜನೆ ಆಗಿಲ್ಲ.
ಮೂಡಿಗೆರೆ ತಾಲ್ಲೂಕಿನ ನೂತನ ತಹಸೀಲ್ದಾರ್ ಆಗಿ ವೈ. ತಿಪ್ಪೇಸ್ವಾಮಿಯವರು ಅಧಿಕಾರಿ ವಹಿಸಿಕೊಂಡಿದ್ದಾರೆ.

ವೈ. ತಿಪ್ಪೇಸ್ವಾಮಿಯವರು ಚಿತ್ರದುರ್ಗ ಮೂಲದವರಾಗಿದ್ದು ಶಿರಾ ತಾಲ್ಲೂಕಿನಿಂದ ಮೂಡಿಗೆರೆಗೆ ವರ್ಗಾವಣೆ ಆಗಿದ್ದಾರೆ. ತಿಪ್ಪೇಸ್ವಾಮಿಯವರು ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿ 2015ರಿಂದ ತಹಸೀಲ್ದಾರ್ ಹುದ್ದೆಗೆ ಬಡ್ತಿ ಪಡೆದು ಹೊಳಲ್ಕೆರೆ, ಹೊಸದುರ್ಗ ಮುಂತಾದ ಕಡೆ ಕಾರ್ಯನಿರ್ವಹಿಸಿದ್ದಾರೆ.
ಇಂದು ಮೂಡಿಗೆರೆ ತಾಲ್ಲೂಕು ಕಛೇರಿಯಲ್ಲಿ ವರ್ಗಾವಣೆಗೊಂಡ ತಹಸೀಲ್ದಾರ್ ನಾಗರಾಜು ಅವರಿಗೆ ಇಲಾಖೆಯ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನಾಗರಾಜು ಅವರು ಮಾತನಾಡಿ ತಮ್ಮ ಒಂದು ವರ್ಷ ಎಂಟು ತಿಂಗಳ ಸೇವಾ ಅವಧಿಯಲ್ಲಿ ಮೂಡಿಗೆರೆ ಕಂದಾಯ ಇಲಾಖೆಯಿಂದ ಜನಸಾಮಾನ್ಯರಿಗೆ ಆದಷ್ಟು ಉತ್ತಮ ಸೇವೆ ಒದಗಿಸಲು ಪ್ರಯತ್ನಿಸಿದ್ದು ರೈತಾಪಿ ವರ್ಗದವರಿಗೆ, ಬಡವರಿಗೆ ನೌಕರರು ಉತ್ತಮ ಸೇವೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಕಳಸ ತಾಲ್ಲೂಕು ತಹಸೀಲ್ದಾರ್ ಆಗಿದ್ದ ನಂದಕುಮಾರ್ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ. ನಂದಕುಮಾರ್ ಅವರು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಗೆ ವರ್ಗಾವಣೆಗೊಂಡಿದ್ದಾರೆ. ಸದ್ಯಕ್ಕೆ ಕಳಸ ತಾಲ್ಲೂಕು ತಹಸೀಲ್ದಾರ್ ಹುದ್ದೆ ತೆರವಾಗಿದೆ.



