alpa

 

 

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ದ್ವಂದ್ವ ನಿಲುವು ಮತ್ತು ಅವರು ಅಲ್ಪಸಂಖ್ಯಾತರ ಬಗ್ಗೆ ನೀಡಿದ ಹೇಳಿಕೆಯಿಂದ ಮನಸ್ಸಿಗೆ ನೋವಾಗಿದ್ದು, ಅವರ ಹೇಳಿಕೆಯನ್ನು ವಿರೋಧಿಸಿ ಪಕ್ಷದ ಜವಾಬ್ದಾರಿ ಹುದ್ದೆಗಳಿಗೆ ಜಿಲ್ಲೆಯ ಅನೇಕ ಮುಸ್ಲೀಂ ಮುಖಂಡರು ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಮುಖಂಡರು ನಾವು ಜೆ.ಡಿ.ಎಸ್. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆವು. ಆದರೆ ಇತ್ತೀಚೆಗೆ ಜೆ.ಡಿ.ಎಸ್. ಪಕ್ಷ ಬಿ.ಜೆ.ಪಿ.ಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಹೆಚ್.ಡಿ. ಕುಮಾರಸ್ವಾಮಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಮಾತ್ರವಲ್ಲ ಅವರು ಜೆ.ಡಿ.ಎಸ್. ಅಲ್ಪಸಂಖ್ಯಾತರನ್ನು ನಂಬಿಕೊಂಡು ರಾಜಕೀಯ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದು ಇದು ಅವರನ್ನು ಬೆಂಬಲಿಸಿಕೊಂಡು ಬಂದ ಅಲ್ಪಸಂಖ್ಯಾತರಿಗೆ ಅಪಾರ ನೋವುಂಟು ಮಾಡಿದೆ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಾಕೀರ್ ಹುಸೇನ್ ; ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪಕ್ಷದ ಯಾವ ಹಿರಿಯರೊಂದಿಗೆ ಚರ್ಚಿಸದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಮಾತ್ರವಲ್ಲ ಅಲ್ಪಸಂಖ್ಯಾತರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದರೆ. ರಾಜ್ಯದಲ್ಲಿ ಅನೇಕ ಕಡೆ ಜೆ.ಡಿ.ಎಸ್. ಗೆಲುವಿನಲ್ಲಿ ಅಲ್ಪಸಂಖ್ಯಾತರ ಮತಗಳೇ ಪ್ರಮುಖವಾಗಿವೆ. ಕುಮಾರಸ್ವಾಮಿಯವರ ನಿಲುವು ಮತ್ತು ಅವರ ಹೇಳಿಕೆಗಳಿಂದ ನಮ್ಮ ಸಮುದಾಯದ ಜನರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪಕ್ಷದ ಅಲ್ಪಂಖ್ಯಾತ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ. ಅಕ್ಟೋಬರ್ 16 ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಪಕ್ಷದ ಮುಖಂಡರ ಸಭೆ ಕರೆದಿದ್ದು, ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮತ್ತು ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ವಾಜೀದ್ ಹುಸೇನ್ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರ ಘಟಕದ ಮತದಿಂದ ಅನೇಕ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಜತೆಗೆ ಅನೇಕ ಕ್ಷೇತ್ರದಲ್ಲಿ ಅಲ್ಪ ಮತದಿಂದ ಸೋಲು ಅನುಭವಿಸಿರುವುದು ರಾಜ್ಯದ ನಾಯಕರಿಗೆ ತಿಳಿದಿದೆ. ಜಾತ್ಯಾತೀತ ನಿಲುವು ಹೊಂದಿದ್ದ ಜೆಡಿಎಸ್ ಈಗ ದಿಢೀರನೇ ಜಾತ್ಯಾತೀತ ನಿಲುವು ಮರೆತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ನೋವು ತಂದಿದೆ. ಹಾಗಾಗಿ ನಮಗೆ ನೀಡಿದ ಜವಾಬ್ದಾರಿ ಹುದ್ದೆಗೆ ರಾಜೀನಾಮೆ ನೀಡಿದ್ದೇವೆಂದು ತಿಳಿಸಿದರು.

ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಮೂಡಿಗೆರೆ ಕ್ಷೇತ್ರ ಸಮಿತಿ ಅಧ್ಯಕ್ಷ ನಾಸೀರ್ ಮಾತನಾಡಿ ಹೆಚ್.ಡಿ. ದೇವೇಗೌಡರ ಜಾತ್ಯಾತೀತ ನಿಲುವು ನಮ್ಮನ್ನು ಜೆ.ಡಿ.ಎಸ್. ಪಕ್ಷದೊಂದಿಗೆ ಗುರುತಿಸಿಕೊಂಡು ಪಕ್ಷದ ಪರವಾಗಿ ಕೆಲಸ ಮಾಡಲು ಪ್ರೇರೇಪಣೆ ನೀಡಿತ್ತು. ದೇವೇಗೌಡರು ಹುಬ್ಬಳ್ಳಿ ಈದ್ಗಾ ಮೈದಾನ ಸಮಸ್ಯೆ ಸೇರಿದಂತೆ ಎಂತಹುದೇ ಸಮಸ್ಯೆಗಳು ಬಂದರು ಅದನ್ನು ಸೌಹಾರ್ದಯುತವಾಗಿ ಬಗೆಹರಿಸುತ್ತಿದ್ದರು. ಆದರೆ ಇತ್ತೀಚೆಗೆ ಹೆಚ್.ಡಿ. ಕುಮಾರಸ್ವಾಮಿಯವರು ಬಿ.ಜೆ.ಪಿ.ಯೊಂದಿಗೆ ಕೈಜೋಡಿಸಿ ಅಲ್ಪಸಂಖ್ಯಾತರ ಬಗ್ಗೆ ಬಹಳ ಕೀಳಾಗಿ ಮಾತನಾಡಿದ್ದಾರೆ. ಇದರಿಂದ ಪಕ್ಷದಲ್ಲಿ ಜವಾಬ್ದಾರಿ ಹುದ್ದೆಯಲ್ಲಿ ಮುಂದುವರಿಯಲು ಮನಸ್ಸಾಗುತ್ತಿಲ್ಲ. ಹಾಗಾಗಿ ಪಕ್ಷದ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ.

ಹಾಗೆಯೇ ಮೂಡಿಗೆರೆ ತಾಲೂಕು ಜೆ.ಡಿ.ಎಸ್. ಅಲ್ಪಂಸಂಖ್ಯಾತರ ಯುವ ಘಟಕದ ಅಧ್ಯಕ್ಷ ಆಸಿಫ್ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಈ ಸಂಬರ್ಧದಲ್ಲಿ ಜೆ.ಡಿ.ಎಸ್. ಅಲ್ಪಸಂಖ್ಯಾತ ಮುಖಂಡರಾದ ಇಬ್ರಾಹಿಂ, ಶಿರಾಜ್, ಮುನ್ನ, ಜಾಕೀರ್ ಹುಸೇನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ