ಮೂಡಿಗೆರೆ ಕಾಂಗ್ರೇಸ್ ಪಕ್ಷದಲ್ಲಿ ದಿನಕ್ಕೊಂದು ಬೆಳವಣಿಗೆಗಳು ಆಗುತ್ತಿದ್ದು, ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ತೀವ್ರ ಸ್ವರೂಪ ಪಡೆಯುತ್ತಿದೆ. ವಿಶೇಷವಾಗಿ ಮೂಡಿಗೆರೆ ಬ್ಲಾಕ್ ಕಾಂಗ್ರೇಸ್ ನಲ್ಲಿ ಹಗ್ಗಜಗ್ಗಾಟ ಮುಂದುವರಿದಿದೆ.
ಕ್ಷೇತ್ರದ ಕಾಂಗ್ರೇಸ್ ನಾಯಕರ ನಡುವಿನ ಜಗಳ ರಾಜಧಾನಿ ಬೆಂಗಳೂರಿಗೆ ತಲುಪಿ ರಾಜ್ಯಮಟ್ಟದ ಸುದ್ದಿಯಾಗಿತ್ತು. ಶಾಸಕರ ಪರ ಮತ್ತು ವಿರೋಧಿ ಬಣಗಳು ಪಕ್ಷದ ವರಿಷ್ಠರನ್ನು ಭೇಟಿಯಾಗಿ ಪರಸ್ಪರ ದೂರುಗಳ ಸುರಿಮಳೆ ಸುರಿಸಿದ್ದರು.
ಈಗ ಅದರ ಮುಂದುವರಿದ ಭಾಗವಾಗಿ ಮೂಡಿಗೆರೆ ಕಸಬಾ ಹೋಬಳಿ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ಸಿ.ಬಿ.ಶಂಕರ್ ಚಿಕ್ಕಳ್ಳ ಇವರನ್ನು ಹೋಬಳಿ ಕಾಂಗ್ರೇಸ್ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಆದೇಶ ಮಾಡಿದ್ದಾರೆ. ಶಂಕರ್ ಅವರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ. ನಿಷ್ಕ್ರೀಯರಾಗಿದ್ದಾರೆ ಎಂಬ ಕಾರಣ ನೀಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೆಚ್.ಜಿ. ಸುರೇಂದ್ರ ಅವರು ಶಂಕರ್ ಅವರನ್ನು ವಜಾಗೊಳಿಸಿ ಮಾಧ್ಯಮಕ್ಕೆ ಪತ್ರ ನೀಡಿರುತ್ತಾರೆ.
ಇತ್ತ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ನೀಡಿರುವ ಆದೇಶ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಿದ್ದಂತೆ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಡಾ. ಅಂಶುಮಂತ್ ಅವರು ಮಧ್ಯಪ್ರವೇಶಿಸಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆದೇಶಕ್ಕೆ ತಡೆನೀಡಿದ್ದಾರೆ. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಜಿಲ್ಲಾ ಕಾಂಗ್ರೇಸ್ ಗಮನಕ್ಕೆ ತಾರದೇ, ಯಾವುದೇ ನಿಯಮಗಳನ್ನು ಪಾಲಿಸದೇ ಏಕಾಏಕಿ ಹೋಬಳಿ ಕಾಂಗ್ರೇಸ್ ಅಧ್ಯಕ್ಷರನ್ನು ವಜಾಗೊಳಿಸಿದ್ದು, ಈ ಆದೇಶಕ್ಕೆ ತಡೆನೀಡಲಾಗಿದೆ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಿಗೆ ಬರೆದಿರುವ ಪತ್ರವನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾರೆ.
ಕಸಬಾ ಹೋಬಳಿ ಕಾಂಗ್ರೇಸ್ ಅಧ್ಯಕ್ಷ ಸಿ.ಬಿ.ಶಂಕರ್ ಅವರು ಪಕ್ಷದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದು, ಪ್ರಸ್ತುತ ಶಾಸಕಿ ನಯನಾ ಮೋಟಮ್ಮ ಅವರ ಪರವಾದ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಶಂಕರ್ ಅವರನ್ನು ವಜಾಗೊಳಿಸಿರುವ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೆಚ್.ಜಿ. ಸುರೇಂದ್ರ ಅವರು ಶಾಸಕಿ ನಯನಾ ಮೋಟಮ್ಮ ವಿರುದ್ಧ ವರಿಷ್ಠರಿಗೆ ದೂರು ನೀಡಲು ತೆರಳಿದ್ದ ನಿಯೋಗದಲ್ಲಿ ಇದ್ದರು. ಇದೀಗ ಶಾಸಕರ ಪರ ಮತ್ತು ವಿರೋಧಿ ಬಣಗಳ ನಡುವಿನ ಭಿನ್ನಾಭಿಪ್ರಾಯ ಪರಸ್ಪರರನ್ನು ವಜಾಗೊಳಿಸುವ ಹಂತಕ್ಕೆ ತಲುಪಿದೆ.


