ಖಾತೆದಾರರಿಗೆ ಗಮನಕ್ಕೆ ಬಾರದಂತೆ ಲಕ್ಷಾಂತರ ರೂಪಾಯಿ ಹಣದ ವಹಿವಾಟು ನಡೆಸಿರುವ ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ.
2023_24 ರಲ್ಲಿ ನೂರಾರು ಅಕೌಂಟ್ ಓಪನ್ ಮಾಡಿ ಅಕ್ರಮವಾಗಿ ಹಣದ ವಹಿವಾಟು ನಡೆಸಿರುವ ಬಗ್ಗೆ ಚಿಕ್ಕಮಗಳೂರು Cen ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಖಾಸಗಿ ಬ್ಯಾಂಕ್ ಸಿಬ್ಬಂದಿ ಸೇರಿದಂತೆ 7 ಜನರ ವಿರುದ್ಧ FIR ದಾಖಲಾಗಿದ್ದು , 6 ಜನರ ಬಂಧನ ,ಓರ್ವ ಎಸ್ಕೇಪ್ ಆಗಿದ್ದಾನೆ.
ಕ್ರಿಕೆಟ್ ಬೆಟ್ಟಿಂಗ್ ಆಪ್ ಗಳ ಹಣದ ವಹಿವಾಟಿಗೆ ಖಾತೆ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ನಗರದ ಶಂಕರಪುರ ಬಡಾವಣೆಯಲ್ಲಿ ನಡೆದಿರುವ ಘಟನೆ. ಲೋನ್ ಕೊಡಿಸುವುದಾಗಿ ಬ್ಯಾಂಕ್ ಗಳಲ್ಲಿ ಅಕೌಂಟ್ ತೆರೆದು ವಂಚನೆ ಮಾಡಲಾಗಿದೆ.
ಮೂರು ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ವಹಿವಾಟು ನಡೆಸಿರುವ ಶಂಕೆ ವ್ಯಕ್ತವಾಗಿದೆ. ಕಳೆದ 6 ತಿಂಗಳ ಹಿಂದೆ ಶಿವಮೊಗ್ಗ cen ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ ಆರೋಪಿಗಳಿಂದಲೇ ಚಿಕ್ಕಮಗಳೂರಿನಲ್ಲಿ ಅಕ್ರಮ ಹಣ ವಹಿವಾಟು ನಡೆಸಿರುವ ಶಂಕೆ
ಚಿಕ್ಕಮಗಳೂರು ಜೆಡಿಎಸ್ ನಗರಸಭೆ ಸದಸ್ಯರೊಬ್ಬರ ಹೆಸರನ್ನ ಹೇಳಿರುವ 6 ಜನ ಆರೋಪಿಗಳು. ನಗರ ಸಭಾ ಸದಸ್ಯರ ಹೆಸರು ಬರುತ್ತಿದ್ದಂತೆ ಇಡೀ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಗೋಪಿ ಸಂಬಂಧಿಕರು ಅಕ್ರಮ ಹಣ ವಹಿವಾಟಿನಲ್ಲಿ ಬಂಧನವಾಗಿದೆ. ಚಿಕ್ಕಮಗಳೂರು Cen ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.
ದೂರಿನ ಸಾರಾಂಶ :
ಚಿಕ್ಕಮಗಳೂರು ಶಂಕರಪುರದ ಡ್ರೈವರ್ ಕೆಲಸ ಮಾಡುತ್ತಿರುವ ಆನಂದ ಎಂಬುವವರು ನೀಡಿರುವ ದೂರಿನ ಸಾರಾಂಶ :
ಈ ದಿನ ದಿನಾಂಕ: 10-07-2026 ರಂದು 12-30 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:-24/03/2023 ರಂದು ಬೆಳಗ್ಗೆ ಸುಮಾರು 11-00 ಗಂಟೆಯ ಸಮಯದಲ್ಲಿ ನಾನು ನಮ್ಮ ಮನೆಯ ಬಳಿ ಇದ್ದಾಗ ನನ್ನ ಸಂಬಂದಿಕರಾದ ಪ್ರಶಾಂತ ಬಿನ್ ತಿಪ್ಪಣ್ಣ ರವರು ಅವರೊಂದಿಗೆ ರಾಹುಲ್ ಬಿನ್ ಶ್ರೀನಿವಾಸ, ಸಂಜಯ್ ಬಿನ್ ಗಂಗ, ಅಸ್ಲಾಂ ಚೇತನ್ ಬಿನ್ ಧರ್ಮೇಶ್, ಶರತ್ ಬಿನ್ ಕಾಂತ ಹಾಗೂ ಇಂಡಸ್ ಇಂಡ್ ಬ್ಯಾಂಕ್ ನ ಸಿಬ್ಬಂದಿ ಯೊಬ್ಬರು ನಮ್ಮ ಮನೆಯ ಬಳಿ ಬಂದು ಬ್ಯಾಂಕ್ ಸಿಬ್ಬಂದಿಯನ್ನು ನಮಗೆ ಪರಿಚಯಿಸಿ ಇವರು ಚಿಕ್ಕಮಗಳೂರು ಎಂ.ಜಿ. ರಸ್ತೆಯಲ್ಲಿರುವ ಇಂಡಸ್ ಇಂಡ್ ಬ್ಯಾಂಕ್ ನೌಕರರು, ಬಡವರಿಗಾಗಿ ಫ್ರೀ ಲೋನ್ ಇದೆ ಯಂತೆ ನಿಮ್ಮ ಹೆಸರಿನಲ್ಲಿ ಇಂಡ್ ಬ್ಯಾಂಕ್ ನಲ್ಲಿ ಖಾತೆಯನ್ನು ತೆರಿಯಿರಿ, ಸದರಿ ಖಾತೆಗೆ ತಗಲುವ ಖರ್ಚನ್ನು ಸಹ ಬ್ಯಾಂಕ್ ನವರೆ ಕೊಡುತ್ತಾರೆ. ಅಂದರೆ ಫ್ರೀ ಅಕೌಂಟ್ ಮಾಡಿ ಕೊಡುತ್ತಾರೆ. ಸದರಿ ಅಕೌಂಟ್ ಗೆ 1000/- ರೂಗಳು ಬರುತ್ತದೆ, ಎಂದು ನನಗೆ ಹಾಗೂ ನಮ್ಮ ಅಕ್ಕಪಕ್ಕದ ವಾಸಿಗಳಿಗೆ ಹೇಳಿ ನಂಬಿಸಿ ನಮ್ಮಿಂದ ನಮ್ಮ ಹೆಸರಿನಲ್ಲಿರುವ ಆದಾರ್ ಕಾರ್ಡ್, ಪಾನ್ ಕಾರ್ಡ್ ನಮ್ಮಗಳ ಫೋಟೋ, ಖಾಲಿ ಕಾಗದ ಪತ್ರಗಳಿಗೆ ನಮ್ಮಿಂದ ಸಹಿ/ಹೆಬ್ಬೆಟ್ಟು ಮಾಡಿಸಿಕೊಂಡು ಹೋದರು. ನಾವುಗಳು ಬಡ ಜನರಾಗಿದ್ದರಿಂದ ನಮಗೆ 1000 ರೂಗಳು ಹಾಗೂ ಕಷ್ಟಕ್ಕೆ ಲೋನ್ ಹಣ ಸಿಗುತ್ತದೆ ಎಂದು ನಾವುಗಳು ಅವರುಗಳನ್ನು ನಂಬಿ ಸಹಿ ಮಾಡಿ ನಮ್ಮಗಳ ದಾಖಲಾತಿಗಳನ್ನು ಕೊಟ್ಟೆವು.ಅಲ್ಲಿಗೆ ಸುಮ್ಮನಾದೆವು. ನಮ್ಮ ಗಳ ಹೆಸರಿನಲ್ಲಿ ಸದರ ಮೇಲ್ಕಂಡ ಬ್ಯಾಂಕ್ ನಲ್ಲಿ ಖಾತೆ ತೆರೆದು ಸದರಿ ಪಾಸ್ ಪುಸ್ತಕ, ಎ.ಟಿ.ಎಂ. ಕಾರ್ಡ್, ಚೆಕ್ ಬುಕ್ ಇವುಗಳನ್ನು ಸಹ ನಮ್ಮಗಳ ಹೆಸರಿನಲ್ಲಿ ಮೇಲ್ಕಂಡ ಪ್ರಶಾಂತ ಬಿನ್ ತಿಪ್ಪಣ್ಣ ರವರು ಅವರೊಂದಿಗೆ ರಾಹುಲ್ ಬಿನ್ ಶ್ರೀನಿವಾಸ, ಸಂಜಯ್ ಬಿನ್ ಗಂಗ ,ಅಸ್ಲಾಂ .ಚೇತನ್ ಬಿನ್ ಧರ್ಮೇಶ್, ಶರತ್ ಬಿನ್ ಕಾಂತ ರವರುಗಳು ಬ್ಯಾಂಕ್ ಸಿಬ್ಬಂದಿಗಳಿಂದ ತೆಗೆದುಕೊಂಡು ಅವುಗಳನ್ನು ನಮಗೆ ಕೊಡದೆ ಅವರ ಬಳಿಯ ಇಟ್ಟುಕೊಂಡಿದ್ದರು. ಈ ಬಗ್ಗೆ ನಾವುಗಳು ಸುಮಾರು ಬಾರಿ ಮೇಲ್ಕಂಡ ಪ್ರಶಾಂತ್ ಮತ್ತು ಇತರರಿಗೆ ನಮ್ಮ ಬಾಬು ಬ್ಯಾಂಕ್ ಪಾಸ್ ಪುಸ್ತಕ, ಚೆಕ್ ಬುಕ್, ಎ.ಟಿ.ಎಂ. ಕಾರ್ಗ ಕೊಡುವಂತೆ ಕೇಳಿದಾಗ ಸದರಿಯವರು ನಮಗೆ ಇಲ್ಲಿಯವರೆಗೆ ಯಾವುದೆ ಲೋನ್ ಹಣ ಬಂದಿಲ್ಲ. ಬಂದ ನಂತರ ನಿಮಗೆ ಹೇಳುತ್ತೇವೆ, ಮತ್ತು ಹಣವನ್ನು ತಲುಪಿಸುತ್ತೇವೆ, ಎಂದು ಅಂದಿನಿಂದ ಇಲ್ಲಿಯವರೆಗೂ ಹೇಳುತ್ತಲೆ ಬಂದಿರುತ್ತಾರೆ.
ನಂತರ ನಮಗೆ ಈಗ 02 ದಿನಗಳ ಹಿಂದೆ ತಿಳಿದ ವಿಚಾರವೇನೆಂದರೆ ಮೇಲ್ಕಂಡ ಪ್ರಶಾಂತ ಬಿನ್ ತಿಪ್ಪಣ್ಣ ರವರು ಅವರೊಂದಿಗೆ ರಾಹುಲ್ ಬಿನ್ ಶ್ರೀನಿವಾಸ, ಸಂಜಯ್ ಬಿನ್ ಗಂಗ, ಅಸ್ಲಾಂ .ಚೇತನ್ ಬಿನ್ ಧರ್ಮೇಶ್, ಶರತ್ ಬಿನ್ ಕಾಂತ ಹಾಗೂ ಇಂಡಸ್ ಇಂಡ್ ಬ್ಯಾಂಕ್ ನ ಸಿಬ್ಬಂದಿ ಯೊಬ್ಬರು ಸೇರಿಕೊಂಡು ನಮ್ಮಗಳಿಗೆ ಮೋಸ ಮಾಡುವ ಉದ್ದೇಶದಿಂದ ಅಪರಾಧಿಕ ಒಳಸಂಚು ರೂಪಿಸಿ ನಮ್ಮಗಳ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳಿಗೆ ನಮ್ಮ ಗಮನಕ್ಕೆ ಬಾರದಂತೆ ಲಕ್ಷಾಂತರ ರೂ ಗಳನ್ನು ಯಾರ್ಯಾರಿಂದಲೋ ಹಾಕಿಸಿಕೊಂಡು ನಮ್ಮ ಬ್ಯಾಂಕ್ ಅಕೌಂಟ್ ಗೆ ಅವರುಗಳ ಮೊಬೈಲ್ ನಂಬರ್ ಗಳನ್ನೆ ನೀಡಿ ನಮಗೆ ಬ್ಯಾಂಕಿನಿಂದ ಯಾವುದೇ ಮಾಹಿತಿ ಬಾರದಂತೆ ಮಾಡಿದ್ದು ಅಲ್ಲದೇ ನಮ್ಮಗಳ ಎಟಿಎಂ ಕಾರ್ಡ್ ನ ಪಾಸ್ ವರ್ಡ್ ಮತ್ತು ಒಟಿಪಿಯನ್ನು ಅವರೇ ಬಳಸಿಕೊಂಡು ನಮ್ಮ ಗಮನಕ್ಕೆ ಬಾರದಂತೆ ನಮ್ಮ ಬ್ಯಾಂಕ್ ಖಾತೆಗಳಲ್ಲಿ ಅವ್ಯವಹಾರ ಮಾಡಿದ್ದು, ಈ ಬಗ್ಗೆ ನಮ್ಮ ಬ್ಯಾಂಕ್ ಖಾತೆಗಳ ಮೇಲೆ ವಿವಿದ ರಾಜ್ಯಗಳಲ್ಲಿ ಸೈಬರ್ ಹೆಲ್ಸ್ ಲೈನ್ ನಂಬರ್ 1930 ರ ಮೂಲಕ ದೂರುದಾಖಲಾಗಿರುವ ವಿಚಾರ ತಿಳಿಯಿತು. ನಂತರ ನಾವುಗಳು ಕೂಡಲೆ ಮೇಲ್ಕಂಡ ಇಂಡಸ್ ಇಂಡ್ ಬ್ಯಾಂಕ್ ಬಳಿ ಹೋಗಿ ವಿಚಾರ ಮಾಡಲಾಗಿ ನನ್ನ ಹೆಸರಿನಲ್ಲಿ ಖಾತೆ ಸಂಖ್ಯೆ 159980736432 ನ್ನು ತೆರೆದಿದ್ದು ಹಾಗೂ ನಮ್ಮ ಅಕ್ಕಪಕ್ಕದವರ ಖಾತೆಗಳ ಬ್ಯಾಂಕ್ ಸ್ಟೇಟ್ ಮೆಂಟ್ ತೆಗೆದು ನೋಡಲಾಗಿ ನಮ್ಮಗಳ ಬ್ಯಾಂಕ್ ಖಾತೆಗಳಿಗೆ ಯಾರ್ಯಾರಿಂದಲೋ ನಮ್ಮ ಗಮನಕ್ಕೆ ಬಾರದಂತೆ ಲಕ್ಷಾಂತರ ರೂಗಳ ವ್ಯವಹಾರ ನಡೆದಿರುವುದು ತಿಳಿದು ಬಂದಿತು. ನಮ್ಮಗಳನ್ನು ನಂಬಿಸಿ ನಮ್ಮಗಳ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಖಾತೆಯನ್ನು ನಮ್ಮಿಂದ ತೆಗೆಸಿ ನಮಗೆ ಮೋಸ ಮಾಡಿರುವ ಹಾಗೂ ನಮ್ಮ ಬ್ಯಾಂಕ್ ಖಾತೆಯಲ್ಲಿ ನಮ್ಮ ಗಮನಕ್ಕೆ ಬಾರದೆ ವ್ಯವಹಾರ ನಡೆಸಿರುವ ಮೇಲ್ಕಂಡ ಪ್ರಶಾಂತ ಬಿನ್ ತಿಪ್ಪಣ್ಣ, ರಾಹುಲ್ ಬಿನ್ ಶ್ರೀನಿವಾಸ, ಸಂಜಯ್ ಬಿನ್ ಗಂಗ, ಅಸ್ಲಾಂ, ಚೇತನ್ ಬಿನ್ ಧರ್ಮೇಶ್, ಶರತ್ ಬಿನ್ ಕಾಂತ ಹಾಗೂ ಇಂಡಸ್ ಇಂಡ್ ಬ್ಯಾಂಕ್ ನ ಸಿಬ್ಬಂದಿ ರವರುಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಕೋರಿದೆ ಎಂದು ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿಕೊಂಡು ಪ್ರ ವ.ವರದಿಯನ್ನು ದಾಖಲಿಸಿರುತ್ತೆ.


