November 6, 2026
;
motamma 2

 

 

ಡಿ.ಬಿ.ಚಂದ್ರೇಗೌಡರು ತನ್ನ ರಾಜಕೀಯ ಜೀವನಕ್ಕೆ ದಾರಿದೀಪವಾಗಿದ್ದರು ಎಂದು ಮಾಜಿ ಸಚಿವೆ ಶ್ರೀಮತಿ ಮೋಟಮ್ಮ ಭಾವುಕರಾಗಿ ಹೇಳಿದ್ದಾರೆ.

ಅವರು ಮಂಗಳವಾರ ಮೂಡಿಗೆರೆ ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಅಗಲಿದ ಹಿರಿಯ ಚೇತನ ಡಿ.ಬಿ. ಚಂದ್ರೇಗೌಡರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಡಿ.ಬಿ. ಚಂದ್ರೇಗೌಡರು ನನ್ನನ್ನು ರಾಜಕೀಯ ಕ್ಷೇತ್ರಕ್ಕೆ ಕರೆತಂದು ಮೂಡಿಗೆರೆ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಿಸಿ ಗೆಲ್ಲಿಸಿಕೊಂಡು ಬಂದಿದ್ದರು. ಅವರು ಸದಾ ನನಗೆ ರಾಜಕೀಯದಲ್ಲಿ ಮಾರ್ಗದರ್ಶಕರಾಗಿ ಆಶೀರ್ವದಿಸಿದ್ದರು. ನನ್ನಂತೆ ಅನೇಕ ಜನರನ್ನು ಅವರು ರಾಜಕೀಯದಲ್ಲಿ ಪ್ರೋತ್ಸಾಹ ನೀಡಿ ಬೆಳೆಸಿದ್ದರು. ಅವರ ಕೃಪೆಯಿಂದಲೇ ಹಳ್ಳಿಗಾಡಿನ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ನನಗೆ ರಾಜಕೀಯದಲ್ಲಿ ಉನ್ನತ ಹುದ್ದೆಗಳಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು ಎಂದು ಡಿ.ಬಿ. ಚಂದ್ರೇಗೌಡರನ್ನು ಸ್ಮರಿಸಿಕೊಂಡರು.

ಚಂದ್ರೇಗೌಡರಿಗೆ ಸಮಾಜದ ಜನಸಾಮಾನ್ಯರ ಬಗ್ಗೆ ಅತೀವವಾದ ಕಾಳಜಿ ಇತ್ತು. ಉನ್ನತವಾದ ಚಿಂತನೆಗಳು, ಜಾತ್ಯಾತೀತ ಮನೋಭಾವನೆ ಅವರಲ್ಲಿ ಹಾಸುಹೊಕ್ಕಾಗಿದ್ದವು. ಅವರೊಬ್ಬ ನಿಜ ಅರ್ಥದಲ್ಲಿ ಮುತ್ಸದ್ದಿಯಾಗಿದ್ದರು. ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರಿಗಾಗಿ ತಮ್ಮ ಸಂಸತ್ ಸ್ಥಾನವನ್ನು ತ್ಯಾಗ ಮಾಡಿ ನಮ್ಮ ಜಿಲ್ಲೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದರು. ಅವರು ಭಾರತದ ಸಂವಿಧಾನದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು. ಅವರ ಅಗಲಿಕೆ ಅತೀವ ನೋವು ತಂದಿದೆ ಎಂದರು.

ಚಿಕ್ಕಮಗಳೂರು ಶಾಸಕ ಹೆಚ್.ಡಿ. ತಮ್ಮಯ್ಯ ಮಾತನಾಡಿ ಡಿ.ಬಿ. ಚಂದ್ರೇಗೌಡರು ಐದು ದಶಕಗಳ ಕಾಲ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಒಬ್ಬ ಪ್ರಾಮಾಣಿಕ ಜನನಾಯಕರಾಗಿದ್ದರು. ನಮ್ಮ ಜಿಲ್ಲೆಗೆ ಹೆಮ್ಮೆಯಾಗಿದ್ದರು ಎಂದರು. ಅವರು ಹಾಕಿಕೊಟ್ಟ ರಾಜಕೀಯ ಮಾರ್ಗ ನಮಗೆಲ್ಲಾ ಮಾದರಿಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೆಚ್.ಜಿ. ಸುರೇಂದ್ರ, ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ, ಗೃಹಮಂಡಳಿ ಮಾಜಿ ಅಧ್ಯಕ್ಷ ಜಿ.ಹೆಚ್. ಹಾಲಪ್ಪಗೌಡ, ಮುಖಂಡರಾದ ಸುಧೀರ್ ಗೌಡ, ವೆಂಕಟೇಶ್ ಗೌಡ, ನಿಶಾಂತ್ ಪಟೇಲ್, ಎಂ.ಎಸ್. ಅನಂತು, ಚನ್ನಕೇಶವೇಗೌಡ, ಸಂಪತ್, ದೀಕ್ಷಿತ್, ಸುಧೀರ್, ದೇವರಾಜು ಮುಂತಾದವರು ಇದ್ದರು.

 

 

 

Leave a Reply

Your email address will not be published. Required fields are marked *