ಮೂಡಿಗೆರೆಯ ಸರ್ಕಾರಿ ಐ.ಟಿ.ಐ ಕಾಲೇಜಿನಲ್ಲಿ ಮೂಡಿಗೆರೆ ರೋಟರಿ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ, ವಾಹನ ಚಾಲನಾ ನಿಯಮಗಳ ಬಗ್ಗೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮೂಡಿಗೆರೆ ಪೊಲೀಸ್ ಠಾಣಾಧಿಕಾರಿಗಳಾದ ಕಿಶೋರ್. ಪಿ ಅವರು ರಸ್ತೆ ಸುರಕ್ಷತೆಯ ಬಗ್ಗೆ ಮಾತನಾಡಿ, ಅಪಘಾತಗಳಿಗೆ ವಾಹನ ಚಾಲಕರ ಅಜಾಗರುಕತೆ, ರಸ್ತೆ ನಿಯಮವನ್ನು ಪಾಲಿಸದೆ ಇರುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಹಾಗೂ ಮೊಬೈಲ್ ನಲ್ಲಿ ಮಾತನಾಡುವುದು ಬಹುತೇಕ ಕಾರಣವಾಗಿರುತ್ತದೆ.
ವಾಹನ ಚಾಲನೆಗಿಂತ ಮೊದಲು ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಅತಿ ಮುಖ್ಯ ಇಲ್ಲದಿದ್ದರೆ ಕಾನೂನಿನ ಪ್ರಕಾರ ಅಪರಾಧವಾಗುತ್ತದೆ ಹಾಗೂ ವಾಹನದ ಇನ್ಸೂರೆನ್ಸ್ ಕೂಡ ಅತಿ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಕುತೂಹಲಕ್ಕಾಗಿ ಸೇವಿಸಿದ ಮಾದಕ ವಸ್ತುಗಳು ಚಟವಾಗಿ ಜೀವನವನ್ನು ಹಾಳುಮಾಡುತ್ತದೆ ಹಾಗಾಗಿ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಿಗೆರೆ ರೋಟರಿ ಸಂಸ್ಥೆಯ ಅಧ್ಯಕ್ಷ ತೇಜಸ್ವಿ ಕೆ.ಎಲ್.ಎಸ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ವಲಯ ಅಸಿಸ್ಟೆಂಟ್ ಗವರ್ನರ್ ವಿನೋದ್ ಕುಮಾರ್ ಶೆಟ್ಟಿ, ಕಾಲೇಜಿನ ಉಪ ಪ್ರಾಂಶುಪಾಲರಾದ ಸುದೀಪ್ ರವರು ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಸಚಿನ್.ಎಸ್, ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್, ಹೆಚ್.ಎನ್. ಪ್ರಸಾದ್, ನರೇಂದ್ರ ಶೆಟ್ಟಿ, ಡಾ. ಜೀವನ್, ಕಾಲೇಜಿನ ಸೂಪರಿಂಡೆಂಟ್ ಚಂದ್ರಶೇಖರ್, ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.



