September 12, 2026
;
koregav1

 

 

ಪ್ರತಿಯೊಬ್ಬರು ಇತಿಹಾಸವನ್ನು ನಿಜದ ನೆಲೆಯಲ್ಲಿ ತಿಳಿದುಕೊಳ್ಳುವ ಅನಿವಾರ್ಯತೆ ಇದೆ. ಇತಿಹಾಸವನ್ನು ತಿರುಚಿ ಅದನ್ನೇ ನಿಜವೆಂದು ಬಿಂಭಿಸುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ಧ ಜನರು ಸಂಘಟಿತರಾಗಬೇಕು ಎಂದು ಮೈಸೂರಿನ ನಿವೃತ್ರ ಪ್ರಾಧ್ಯಾಪಕ, ಚಿಂತಕ ಪ್ರೋ. ಮಹೇಶ್ ಚಂದ್ರ ಗುರು ಹೇಳಿದರು.

ಅವರು ಶುಕ್ರವಾರ ಸಂಜೆ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣ ಸಮಿತಿ ವತಿಯಿಂದ ಮೂಡಿಗೆರೆ ಪಟ್ಟಣದ ಲಯನ್ಸ್ ವೃತ್ತದಲ್ಲಿ ಏರ್ಪಡಿಸಿದ್ದ ಭೀಮಾ ಕೋರೆಗಾವ್ ವಿಜಯೋತ್ಸವ ಕಾರ್ಯಕ್ರಮವನ್ನು ತಮಟೆ ಹೊಡೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಿಂಧು ಕಣಿವೆ ನಾಗರೀಕತೆಯಲ್ಲಿ ಸಮಾನತೆ, ಸಮ ಸಂಸ್ಕøತಿ ನೆಲೆಯೂರಿತ್ತು. ಆರ್ಯರು ಬಂದ ಬಳಿಕ ಈ ದೇಶ ಮತ್ತು ಸಿಂಧೂ ನಾಗರೀಕತೆಯನ್ನು ಗುಲಾಮರ ಬೀಡಾಗಿಸಿದರು. ಅವರ ಕುತಂತ್ರದ ವಿರುದ್ಧವಾಗಿ ಬುದ್ದ ಹೋರಾಟ ನಡೆಸಿ ಭಾರತೀಯರ ಬದುಕಿಗೆ ಮಾನವ ಧರ್ಮದ ಲೇಪನವನ್ನು ಕೊಡುತ್ತಾರೆ. ಆರ್ಯರು ಮಾಡಿದ ಕೆಲಸವನ್ನು ಈಗಿನ ಪ್ರಧಾನಿಗಳು ಮಾಡಲು ಹೊರಟಿದ್ದಾರೆ. ಶೂದ್ರರು ಇತಿಹಾಸ ತಿಳಿಯದೇ ಮನುವಾದಿಗಳನ್ನು ಬೆಂಬಲಿಸುತ್ತಿದ್ದಾರೆ. ಇದನ್ನು ತಪ್ಪಿಸಬೇಕು. ಇದು ವಿಶ್ರಾಂತಿ ಪಡೆಯುವ ಕಾಲವಲ್ಲ. ಎಚ್ಚ್ಚೆತ್ತುಕೊಳ್ಳುವ ಕಾಲ. ಮೂಲ ನಿವಾಸಿಗಳಿಗೆ ರಾಜ್ಯ ಆಳಿ ಗೊತ್ತೆ ಹೊರತು, ಹಾಳು ಮಾಡಲು ಗೊತ್ತಿಲ್ಲ ಎಂಬುದು ಸಾಬೀತು ಮಾಡಬೇಕಿದೆ. ಪ್ರತಿಯೊಬ್ಬರೂ ಭೀಮನ ಚಿಂತನೆ ತಿಳಿದುಕೊಳ್ಳಬೇಕು. ಸಾರ್ವಭೌಮತ್ವ, ಶಿಕ್ಷಣ, ಸಮಾನತೆಗೆ ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ದವಾಗಬೇಕಿದೆ ಎಂದು ಕರೆ ನೀಡಿದರು.

ವಾಗ್ಮಿ,  ವಕೀಲ ಸುಧೀರ್  ಕುಮಾರ್ ಮುರೊಳ್ಳಿ ಮಾತನಾಡಿ, 1818ರಲ್ಲಿ ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವ ಮೊದಲ ಸ್ವಾತಂತ್ರ್ಯ ಹೋರಾಟದ ಅನುಭವ ಕೊಟ್ಟ ದಿನ. ಹಿಂದಿನ ಹಾಗೂ ಈಗಿನ ಪರಿಸ್ಥಿತಿಯನ್ನು ಅವಲೋಕನ ಮಾಡಿಕೊಳ್ಳಬೇಕೆಂದರೆ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು. ಓರ್ವ ಹೆಣ್ಣು ಮಗಳು ರಾತ್ರಿ 12 ಗಂಟೆಗೆ ಒಬ್ಬಳೆ ಧೈರ್ಯವಾಗಿ ತಿರುಗಾಡುತ್ತಾಳೋ ಅಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಹಾಗೆ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು. ಆದರೆ ಇಂದು ರಾತ್ರಿ ಮಹಿಳೆ ಒಬ್ಬಳೇ ಧೈರ್ಯವಾಗಿ ತಿರುಗಾಡುತ್ತಾಳೆಂದರೆ ಅದು ಸಂವಿಧಾನ ಕಾರಣವೆಂದು ಅರಿಯಬೇಕಿದೆ. ಇವತ್ತು ಸಂವಿಧಾನವನ್ನು ಬದಲಾಯಿಸುತ್ತೇವೆಂದು ಹೇಳುವವರ ಬಾಯಿ ಮುಚ್ಚಿಸಬೇಕಾಗಿದೆ. ಸಂವಿಧಾನ ಯಾರಪ್ಪನ ಗಂಟಲ್ಲ. ಬದಲಾಯಿಸಲು ಹೊರಟರೆ ತಕ್ಕ ಉತ್ತರ ನೀಡಲು ಸಿದ್ಧವಾಗಬೇಕು. ಸಂವಿಧಾನವನ್ನು ಎಲ್ಲರೂ ಎದೆಗಪ್ಪಿಕೊಂಡೆರೆ ಅದೇ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ, ಚಿತ್ರನಟ ಚೇತನ್ ಅಹಿಂಸಾ ಮಾತನಾಡಿ, ಮಾನವನ ಜಾತಿ, ಧರ್ಮ ಬೇರೆ ಬೇರೆ ಇರಬಹುದು. ಆದರೆ. ಅದು ನಮ್ಮ ಆಯ್ಕೆಯಲ್ಲ. ನೆಂಟರು, ಸ್ನೇಹಿತರು, ನೆರೆಹೊರೆಯವರು ಯಾರೂ ನಮ್ಮವರಲ್ಲ. ಸಮಾನತೆ ಮನೋಭಾವ ಉಳ್ಳವರು ಮಾತ್ರ ನಮ್ಮವರಾಗುತ್ತಾರೆ. ಇಂದು ಜನಗಣತಿಯ ಮಾಹಿತಿಯನ್ನು ಹೊರ ಬಿಡುತ್ತಿಲ್ಲ. ಅದನ್ನು ಬಿಟ್ಟರೆ ಉಳಿಗಾಲವಿಲ್ಲವೆಂಬುದು ಆಳುವ ಸರಕಾರಕ್ಕೆ ಅರ್ಥವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಶೋಷಿತರ ವಿರುದ್ಧವಾದ ನಿಲುಗಳನ್ನು ತೆಳೆಯುತ್ತಿವೆ. ಸಮಾನತೆ ತರಬೇಕೆಂಬ ಹಂಬಲ ಯಾರಿಗೂ ಇದ್ದಂತಿಲ್ಲ. ಈಗಾಗಲೇ ಭೀಮ ಕೋರೆಗಾಂವ್ ವಿಜಯೋತ್ಸವದಲ್ಲಿ ಪ್ರಗತಿಪರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕಗೊಳ್ಳುತ್ತಲೇ ಇದೆ. ಇದು ಮುಂದೆ ಈ ದೇಶದಲ್ಲಿ ಅಸಮಾನತೆ ತೊಲಗಿ ಸಮಾನತೆ ಬರುವ ಸಂಕೇತವಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಕೋರೆಗಾಂವ್ ಹೋರಾಟದ ಮುಖಂಡ ಸಿದ್ದನಾಯಕ, ವಿಜಯೋತ್ಸವ ಸ್ತಂಭ, ಅಂಬೇಡ್ಕರ್ ಭಾವಚಿತ್ರ, ಸಂವಿಧಾನ ಪೀಠಿಕೆಯ ಸ್ತಬ್ಥಚಿತ್ರದೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡು ಕೋರೆಗಾಂವ್ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.

ನಿವೃತ್ತ ಶಿಕ್ಷಕ ಹಾಲಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗಾಯಕ ಬಕ್ಕಿ ಮಂಜುನಾಥ್ ಅವರನ್ನು ಗೌರವಿಸಲಾಯಿತು.

ಸಮಿತಿ ಅಧ್ಯಕ್ಷ ಸುಂದ್ರೇಶ್ ಕನ್ನಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಬಿಎಸ್ಪಿ ತಾಲೂಕು ಅಧ್ಯಕ್ಷ ಎಲ್.ಬಿ.ರಮೇಶ್, ಮೇಘನ ಚೇತನ್, ಸಮಿತಿ ಕಾರ್ಯದರ್ಶಿ ಸುಂದ್ರೇಶ್ ಹೊಯ್ಸಳಲು, ಹರೀಶ್ ನಲ್ಕೆ, ಭಾನುಪ್ರಕಾಶ್ ಹೆಸಗಲ್ ಮತ್ತಿತರರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;