ಮೂಡಿಗೆರೆ ಸಕಲೇಶಪುರ ರಸ್ತೆಯಲ್ಲಿ ಹ್ಯಾಂಡ್ ಪೋಸ್ಟ್ ಸಮೀಪ ಇರುವ ತೋಟಗಾರಿಕಾ ಮಹಾವಿದ್ಯಾಲಯದ ಸಮೀಪ ಮುಖ್ಯ ರಸ್ತೆಯ ಬದಿಯಲ್ಲಿ ಕಸದ ರಾಶಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ದೊಡ್ಡ ಕಸದ ರಾಶಿಯಾಗಿದ್ದು, ಇದರ ಬಗ್ಗೆ ಸಂಬಂಧಿಸಿದ ಯಾರೂ ಕಾಳಜಿ ವಹಿಸಿದಂತೆ ಕಾಣುತ್ತಿಲ್ಲ.
ಈ ಕಸದ ರಾಶಿ ಸಮೀಪವೇ ಮೂಡಿಗೆರೆ ತೋಟಗಾರಿಕಾ ಕಾಲೇಜು ಮತ್ತು ಕಾಲೇಜು ವಿದ್ಯಾರ್ಥಿ ನಿಲಯವಿದೆ. ವಿದ್ಯಾರ್ಥಿ ನಿಲಯದ ಎದುರಿಗೇ ಈ ಕಸದ ರಾಶಿ ಇದೆ. ಇಲ್ಲಿ ಮನೆಯ ಕಸ, ತರಕಾರಿ ಮೀನು ಮಾಂಸದ ತಾಜ್ಯಗಳನ್ನು ಎಸೆದು ದೊಡ್ಡ ರಾಶಿಯಾಗಿದೆ. ಪ್ಲಾಸ್ಟಿಕ್ ತ್ಯಾಜ್ಯಗಳು ಗಾಳಿಗೆ ರಸ್ತೆಯ ತುಂಬೆಲ್ಲಾ ಹರಿದಾಡುತ್ತಿವೆ. ಗೋವುಗಳು ಈ ಪ್ಲಾಸ್ಟಿಕ್ ತ್ಯಾಜ್ಯ ತಿಂದು ಅನಾರೋಗ್ಯಕ್ಕೆ ಈಡಾಗುತ್ತಿವೆ.
ಇಲ್ಲಿ ಕಸದ ರಾಶಿ ಕೊಳೆತು ನಾರುತ್ತಿದ್ದು, ಇದರಿಂದ ಸಮೀಪದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಮತ್ತು ದಾರಿಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ, ಅಕ್ಕಪಕ್ಕದ ನಿವಾಸಿಗಳಿಗೆ ರೋಗ ತಂದೊಡ್ಡುವ ತಾಣವಾಗಿ ಮಾರ್ಪಟ್ಟಿದೆ.
ಈ ಬಗ್ಗೆ ಸ್ಥಳೀಯ ಹಳೇಮೂಡಿಗೆರೆ ಗ್ರಾಮ ಪಂಚಾಯಿತಿಯವರು ಸೂಕ್ತ ಕ್ರಮ ಜರುಗಿಸಿ ಇಲ್ಲಿ ರಾಶಿಯಾಗಿರುವ ಕಸವನ್ನು ಸಾಗಿಸಲು ವ್ಯವಸ್ಥೆ ಮಾಡಬೇಕು. ಮುಂದೆ ಇಲ್ಲಿ ಯಾರೂ ಕಸ ಎಸೆಯದಂತೆ ಎಚ್ಚರಿಗೆ ಫಲಕ ಅಳವಡಿಸಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಕಸವನ್ನು ಸಾಗಿಸಿ ಸ್ವಚ್ಚಗೊಳಿಸದೇ ಹೋದರೆ ಗ್ರಾಮ ಪಂಚಾಯಿತಿ ಎದುರು ಕಸ ತಂದು ಸುರಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.


