ಕಳಸ ಸಮೀಪದ ಎಸ್ಟೇಟ್ ಒಂದರಲ್ಲಿ ಕುಡಿದ ಮತ್ತಿನಲ್ಲಿ ಕಾರ್ಮಿಕರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ದಾರುಣ ಘಟನೆ ವರದಿಯಾಗಿದೆ.
ತೋಟದ ಕಳೆ ತೆಗೆಯಲು ಬಂದಿದ್ದ ಬಳ್ಳಾರಿ ಜಿಲ್ಲೆಯ ಹಿರೇಹಡಗಲಿ ಮೂಲದ ಭೀಮ (32) ಎಂಬುವವರನ್ನು ಅವರ ಜೊತೆಯಲ್ಲೇ ಇದ್ದ ಇಬ್ಬರು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.ಕಳೆದ ಐದು ದಿನಗಳ ಹಿಂದೆ ಬಳ್ಳಾರಿ ಜಿಲ್ಲೆಯಿಂದ ತೋಟದ ಕಳೆ ತೆಗೆಯುವ ಕೆಲಸಕ್ಕಾಗಿ ಕಾರ್ಮಿಕರ ತಂಡವೊಂದು ಕಳಸ ಸಮೀಪದ ಗಾಳಿಗಂಡಿಯ ಎಸ್ಟೇಟ್‌ಗೆ ಆಗಮಿಸಿತ್ತು.
ಇದರಲ್ಲಿ ಭೀಮ, ಪಕೀರಪ್ಪ ಹಾಗೂ ಬಸವರಾಜ್ ಎಂಬ ಮೂವರು ಕಾರ್ಮಿಕರು ಎಸ್ಟೇಟ್‌ನ ಕೂಲಿ ಲೈನ್‌ನ ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು. ಸೋಮವಾರ ರಾತ್ರಿ ಮೂವರೂ ಒಟ್ಟಿಗೆ ಮದ್ಯಪಾನ ಮಾಡಿದ್ದು, ಈ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಮಾತಿನ ಚಕಮಕಿ ನಡೆದಿದೆ.
ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದ್ದು, ಪಕೀರಪ್ಪ ಮತ್ತು ಬಸವರಾಜ್ ಸೇರಿ ಕತ್ತಿಯಿಂದ ಭೀಮನ ತಲೆಯ ಹಿಂಭಾಗಕ್ಕೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವವಾದ ಕಾರಣ ಭೀಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಕೊಲೆ ನಡೆಸಿದ ಬಳಿಕ ಆರೋಪಿಗಳಾದ ಪಕೀರಪ್ಪ ಮತ್ತು ಬಸವರಾಜ್ ಯಾವುದೇ ಭಯವಿಲ್ಲದೇ, ಮೃತನ ಶವದ ಜೊತೆಯಲ್ಲೇ ಚಾಪೆ ಹಾಸಿ ರಾತ್ರಿಯಿಡೀ ಮಲಗಿದ್ದಾರೆ.
ಸೋಮವಾರ ಬೆಳಿಗ್ಗೆ ಎಸ್ಟೇಟ್ ಕೆಲಸಕ್ಕೆ ಕರೆಯಲು ಬಂದಾಗ ನಮಗೆ ಹುಷಾರಿಲ್ಲ ಇಂದು ಕೆಲಸಕ್ಕೆ ಬರುವುದಿಲ್ಲ ಎಂದು ಸಬೂಬು ಹೇಳಿದ್ದಾರೆ. ಆದರೆ, ಅವರ ನಡವಳಿಕೆಯಿಂದ ಅನುಮಾನಗೊಂಡು ಕೊಠಡಿಯನ್ನು ಪರಿಶೀಲಿಸಿದಾಗ ಈ ಭೀಕರ ಹತ್ಯೆ ಬೆಳಕಿಗೆ ಬಂದಿದೆ.
ಹೊಡೆದಾಟದ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದ ಆರೋಪಿ ಬಸವರಾಜನನ್ನು ಕಳಸ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮತ್ತೋರ್ವ ಆರೋಪಿ ಪಕೀರಪ್ಪನನ್ನು ಕಳಸ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಹಾಗೂ ಡಿವೈಎಸ್‌ಪಿ ಬಾಲಾಜಿ ಸಿಂಗ್, ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್, ಕಳಸ ಠಾಣಾಧಿಕಾರಿ ಚಂದ್ರ ಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


