ಕೊಲೆ ಆರೋಪಿ ಸಚಿನ್
ಇತ್ತೀಚೆಗೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಬಳಿ ಚಿಕ್ಕಮಗಳೂರು ಕಡೂರು ರಸ್ತೆಯಲ್ಲಿ ನಡೆದಿದ್ದ ಹಿಟ್ & ರನ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹತ್ಯೆಯಾದ ಯುವಕನನ್ನು ಆತನ ಸ್ನೇಹಿತನೇ ಕೊಲೆಗೈದಿರುವುದು ತನಿಖೆ ವೇಳೆ ಗೊತ್ತಾಗಿದೆ.
ಯಶವಂತ್ (26) ಕೊಲೆಯಾಗಿದ್ದ ಯುವಕ. ಈತನ ಸ್ನೇಹಿತ ಸಚಿನ್ ಹತ್ಯೆಗೈದ ಆರೋಪಿಯಾಗಿದ್ದಾನೆ. ಇಬ್ಬರೂ ಹಾಸನದ ವಿಜಯನಗರದ ನಿವಾಸಿಗಳು.
ಕಳೆದ ಜೂನ್ 12 ರಂದು ರಾತ್ರಿ ಹಿರೇಗೌಜ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಶವಂತ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಈ ಜಾಗದಲ್ಲಿ ಗೂಡ್ಸ್ ಆಟೋವೊಂದು ಪಲ್ಟಿಯಾಗಿತ್ತು. ಆಟೋ ಪಕ್ಕದಲ್ಲೇ ಶವ ಪತ್ತೆಯಾಗಿತ್ತು. ಇದರಿಂದಾಗಿ ಅಪಘಾತದಲ್ಲಿ ಯುವಕ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿತ್ತು. ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯಶವಂತ್ ಬೈಕ್ ನಾಪತ್ತೆ ಬೆನ್ನಲ್ಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ತನಿಖೆ ವೇಳೆ ಕೊಲೆ ರಹಸ್ಯ ಬಯಲಿಗೆ ಬಂದಿದೆ. ಕೊಲೆಗೈದು ಏನೂ ಗೊತ್ತಿಲ್ಲದವನಂತೆ ಆರೋಪಿ ಸಚಿನ್ ನಟಿಸಿದ್ದ. ಒಂದೂವರೆ ತಿಂಗಳ ತನಿಖೆ ನಂತರ ಪೊಲೀಸರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಳೆಯ ದ್ವೇಷ, ಹಣಕಾಸು ವಿಚಾರಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ.
ಮೊದಲೇ ರಸ್ತೆಯಲ್ಲಿ ಬಿದ್ದಿದ್ದ ಯುವಕನ ಮೇಲೆ ವಾಹನ ಹತ್ತಿಸುವುದನ್ನು ತಪ್ಪಿಸುವಾಗ ನನ್ನ ವಾಹನ ಅಪಘಾತಕ್ಕೆ ಈಡಾಯಿತು’ ಎಂದು ಸರಕು ಸಾಗಣೆ ವಾಹನ ಚಾಲಕ ನೀಡಿದ ಮಾಹಿತಿ ಆಧರಿಸಿ ಕಡೂರು ಇನ್‌ಸ್ಪೆಕ್ಟರ್ ರಫೀಕ್ ಮತ್ತು ಸಖರಾಯಪಟ್ಟಣ ಪಿಎಸ್‌ಐ ಪವನ್ ತನಿಖೆ ಆರಂಭಿಸಿದರು.
ಅವಘಡ ನಡೆದ ದಿನ ಯಶಂವತ ತನ್ನ ತಾಯಿಗೆ ಕರೆ ಮಾಡಿ ಬೈಕ್ ಕಂತಿನ ಹಣ ಪಡೆಯಲು ಅಜ್ಜಂಪುರಕ್ಕೆ ತೆರಳುತ್ತಿರುವುದಾಗಿ ಹೇಳಿದ್ದರು. ಅಜ್ಜಂಪುರದ ಪುನೀತ್ ಬಳಿ ವಿಚಾರಿಸಿದಾಗ ಕಂತಿನ ಹಣದ ಚೆಕ್ ನೀಡಿರುವುದಾಗಿ ತಿಳಿಸಿದ್ದು, ಜತೆಗೆ ಸಚಿನ್ ಎಂಬ ಸ್ನೇಹಿತ ಇದ್ದ ಎಂಬ ಮಾಹಿತಿ ನೀಡಿದ್ದರು.
ಸಖರಾಯಪಟ್ಟಣ, ಚಿಕ್ಕಮಗಳೂರು, ಅಜ್ಜಂಪುರದ ವಿವಿಧೆಡೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪರಿಶೀಲಿಸಿದಾಗ ಯಶವಂತ ಮತ್ತು ಸಚಿನ್ ಚಿಕ್ಕಮಗಳೂರಿನ ಮದ್ಯದ ಅಂಗಡಿಗಳಿಗೆ ತೆರಳಿ ಮದ್ಯ ಸೇವನೆ ಮಾಡಿರುವುದು ಪತ್ತೆಯಾಗಿತ್ತು. ಚಿಕ್ಕಮಗಳೂರಿನ ಲಾಡ್ಜ್ ಒಂದರಲ್ಲಿ ಕೊಠಡಿ ಪಡೆಯಲು ಕೇಳಿದ್ದು, ವಿಪರೀತ ಪಾನಮತ್ತರಾಗಿದ್ದ ಕಾರಣ ಕೊಠಡಿ ನೀಡಲು ವಸತಿಗೃಹದವರು ನಿರಾಕರಿಸಿದ್ದರು.
ಬಳಿಕ ಸ್ಕೂಟರ್‌ನಲ್ಲಿ ಇಬ್ಬರೂ ಸಖರಾಯಪಟ್ಟಣ ಕಡೆ ರಾತ್ರಿ ಇಬ್ಬರೂ ತೆರಳಿದ್ದು, ಕೆಲ ಗಂಟೆಗಳ ನಂತರ ಅದೇ ಸ್ಕೂಟರ್‌ನಲ್ಲಿ ಸಚಿನ್ ಒಬ್ಬನೇ ವಾಪಸ್ ಬಂದಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿತ್ತು. ಸಚಿನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಸಚಿನ್‌ಗೆ ಯಶವಂತ ₹28 ಸಾವಿರ ಹಣ ಕೊಡಬೇಕಿತ್ತು. ಈ ವಿಷಯಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ರಸ್ತೆ ಮಧ್ಯದಲ್ಲಿ ಮೂತ್ರ ವಿಸರ್ಜನೆಗೆ ನಿಲ್ಲಿಸಿದಾಗ ಜಗಳ ನಡೆದು ಸ್ಕ್ರೂಡ್ರೈವರ್‌ನಿಂದ ಯಶವಂತಗೆ ತಿವಿದು ರಸ್ತೆಗೆ ತಲೆ ಜಜ್ಜಿ ಚೆಕ್ ಮತ್ತು ಬ್ಯಾಗ್ ತೆಗೆದುಕೊಂಡು ಹೋಗಿದ್ದನ್ನು ಸಚಿನ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


