ಬಾಳೆಹೊನ್ನೂರು ಅರಣ್ಯ ಇಲಾಖೆ ವ್ಯಾಪ್ತಿಯ ಮಾಗುಂಡಿ ವಲಯದ ಹಲಸೂರು ಮೀಸಲು ಅರಣ್ಯದ ಸರ್ವೆ ನಂ.45 ರ ನೇಮನಹಳ್ಳಿ ಸಾಗುವಾನಿ ನೇಡುತೋಪಿನ ಕೆಮ್ಮಣ್ಣು ಎಂಬಲ್ಲಿ 3 ಸಾಗುವಾನಿ 1 ಶಿವನಿ ಜಾತಿಯ ಮರಗಳನ್ನು ಕಡಿದು ನಾಟಾ ಮಾಡಿ ಮುಚ್ಚಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಉಪ ವಲಯಾರಣ್ಯಧಿಕಾರಿ ಪತ್ತೆ ಹಚ್ಚಿದ್ದಾರೆ. ಸ್ಥಳದಲ್ಲಿ 6.081 ಘನ ಮೀಟರ್ ನಾಟಾ ಪತ್ತೆಯಾಗಿದೆ. ಹಲಸೂರು ಗ್ರಾಮದ ರವೀಶ, ಜಕ್ಕಣಕ್ಕಿ ಗ್ರಾಮದ ಶ್ರೀಧರ, ದೇವಗೋಡು ಗ್ರಾಮದ ಸತ್ಯ ನಾರಾಯಣ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳು ನಾಪತ್ತೆಯಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಸೀಕೆ ವಲಯದ ಮುದುಗುಣಿ ಕಿರು ಅರಣ್ಯ ಪ್ರದೇಶದ ಸರ್ವೆ ನಂ.90ರಲ್ಲಿ 5 ಸಾಗುವಾನಿ ಮರಗಳನ್ನು ಕಡಿದು ಎಲೆಗಳ ನಡುವೆ ಮುಚ್ಚಿಟ್ಟಿದ್ದನ್ನು ಉಪ ವಲಯ ಅರಣ್ಯಧಿಕಾರಿ ಪತ್ತೆ ಹಚ್ಚಿದ್ದಾರೆ. ಸ್ಥಳದಲ್ಲಿ ಒಟ್ಟು 1.013 ಘ.ಮೀ ನಾಟಾ ಹಾಗೂ ಸೈಜ್ ವಶಪಡಿಸಿಕೊಳ್ಳಲಾಗಿದೆ. ಕೆ.ಎಂ ಮೋಹನ್ ಕಿಚ್ಚಬ್ಬಿ, ಸುರೇಶ್ ಅಲಿಯಾಸ್ ಗುಂಡ ಮೆಕಾನಿಕ್ ಬಾಳೆಹೊನ್ನೂರು ಹಾಗೂ ಹೇರೂರಿನ ಕುಮಾರ್ ದಿವೀನ್ ವಿರುದ್ದ ಪ್ರಕರಣ ದಾಖಲಾಗಿದೆ. ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಟಾದ ಒಟ್ಟು ಮೌಲ್ಯ ರೂ. 7 ಲಕ್ಷ ಆಗಿರಬಹುದೆಂದು ಅಂದಾಜಿಸಲಾಗಿದೆ. ಎ.ಸಿ.ಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ ಆರ್ ಎಫ್ ಒ ಮಂಜುನಾಥ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್, ಸದಾಶಿವ, ಚೇತನ್, ನಾಗಾರಾಜ್, ರಜನೀಶ್, ನವೀನ್ ಕಾರ್ಯಚರಣೆಯಲ್ಲಿ ಭಾಗವಹಿಸಿದರು. ವಶ ಪಡಿಸಿಕೊಂಡ ನಾಟಾವನ್ನು ಸಂಗಮೇಶ್ವರ ಡಿಪೊಗೆ ಸಾಗಿಸಲಾಗಿದೆ.


