ಮೂಡಿಗೆರೆ ತಾಲ್ಲೂಕು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಂ ಸೇವಾ ಸಂಘದ ಅಧ್ಯಕ್ಷರಾಗಿ ಸಿ.ವಿ. ಮಹೇಶ್ ಜನ್ನಾಪುರ ಸತತ ಮೂರನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ.
ಭಾನುವಾರ ಮೂಡಿಗೆರೆ ಪಟ್ಟಣದ ತಾಲೂಕು ಪಂಚಾಯಿತಿ ದೀನ್ ದಯಾಳ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಘಟಕದ ಅಧ್ಯಕ್ಷರುಗಳು ಸದಸ್ಯರುಗಳು ಭಾಗವಹಿಸಿದ್ದರು. ಈ ಹಿಂದಿನ ಪದಾಧಿಕಾರಿಗಳ ರಾಜೀನಾಮೆಯನ್ನು ಸಭೆಯಲ್ಲಿ ಸ್ವೀಕರಿಸಲಾಯಿತು ನಂತರ ಎಲ್ಲಾ ಸದಸ್ಯರ ಅಭಿಪ್ರಾಯದ ಮೇರೆಗೆ ಮಹೇಶ್ ಅವರನ್ನು ಅಧ್ಯಕ್ಷರಾಗಿ ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಮೂಡಿಗೆರೆ ನಗರದ ಜಗನ್ಮೋಹನ್ , ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣಾಪುರದ ಪ್ರವೀಣ್ ಕೆ.ಆರ್, ಸಹಕಾರದರ್ಶಿಯಾಗಿ ಬಿಳಗುಳದ ರಾಜೇಶ್, ಖಜಾಂಚಿಯಾಗಿ ಮೂಡಿಗೆರೆಯ ಆನಂದ್ ರವರು ಆಯ್ಕೆಗೊಂಡರು. ಸಂಘಟನಾ ಕಾರ್ಯದರ್ಶಿಗಳಾಗಿ ಮೋಹನ್ ಕುನ್ನಳ್ಳಿ, ಸುಧಾ ರಾಜು ಮೂಡಿಗೆರೆ, ಅನ್ನಪೂರ್ಣ ಜನ್ನಾಪುರ, ಸುರೇಶ್ ಕುನ್ನಳ್ಳಿ ಇವರು ಆಯ್ಕೆಗೊಂಡರು.
ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಬಣಕಲ್ ಘಟಕದಿಂದ ರವಿ ಬಾಳೂರು, ಹ್ಯಾಂಡ್ ಪೋಸ್ಟ್ ಘಟಕದಿಂದ ಪ್ರಕಾಶ್ ಹಾಗೂ ವಾಸು, ಕುನ್ನಳ್ಳಿ ಘಟಕದಿಂದ ಶಶಿ, ಬಿಳಗುಳ ಘಟಕದಿಂದ ಶಶಿ ಹಾಗೂ ಪ್ರಕಾಶ್, ಮೂಡಿಗೆರೆ ನಗರ ಘಟಕದಿಂದ ಮುತ್ತುಕೃಷ್ಣ ಆಲ್ದೂರ್, ಗೋಣಿಬೀಡು ಘಟಕದಿಂದ ಉದಯ್ ರವರು ಆಯ್ಕೆಗೊಂಡರು.
ಸಂಘದ ಅಧ್ಯಕ್ಷರಾಗಿ ಸತತ ಮೂರನೇ ಅವಧಿಗೆ ಆಯ್ಕೆಗೊಂಡ ಸಿ.ವಿ. ಮಹೇಶ್ ಅವರು ಮಾತನಾಡಿ ; ಮೂಡಿಗೆರೆ ತಾಲ್ಲೂಕಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಂ ಸೇವಾ ಸಂಘವು ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದ ನೊಂದವರಿಗೆ ಸಹಾಯ ನೀಡುವುದು, ಅನಿರೀಕ್ಷಿತ ತೊಂದರೆಗಳು ಎದುರಾದಾಗ ಸಹಾಯಕ್ಕೆ ಬರುವುದು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು, ಹಬ್ಬಹರಿದಿನಗಳನ್ನು ಒಟ್ಟಾಗಿ ಆಚರಿಸುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಸಂಘಟಿಸುವ ಗುರಿ ಹೊಂದಲಾಗಿದೆ ಎಂದರು. ಸತತ ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನ ನೀಡಿ ವಿಶ್ವಾಸ ತೋರಿದ ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.




