ವಿಧಾನಪರಿಷತ್ ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಸೋಲಾಗಿದೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಪುಟ್ಟಣ್ಣ 1506 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಆರಂಭದಿಂದಲೂ ಮುನ್ನಡೆ ಕಾಯ್ದುಗೊಂಡಿದ್ದ ಪುಟ್ಟಣ್ಣ ಅಂತಿಮವಾಗಿ ಎಪಿ ರಂಗನಾಥ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಪುಟ್ಟಣ್ಣ ಗೆಲುವು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.
ಕಾಂಗ್ರೆಸ್ನ ಪುಟ್ಟಣ್ಣ ಒಟ್ಟು 8,260 ಮತಗಳನ್ನು ಪಡೆದುಕೊಂಡಿದ್ದರೆ, ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಪಿ ರಂಗನಾಥ್ ಅವರಿಗೆ ಒಟ್ಟು 6753 ಮತಗಳು ಬಿದ್ದಿವೆ. ಇನ್ನು 1239 ಮತಗಳು ತಿರಸ್ಕೃತಗೊಂಡಿವೆ.
ಪುಟ್ಟಣ್ಣ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಕಳೆದ ಮಾರ್ಚ್ ನಲ್ಲಿ ಬಿಜೆಪಿಗೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿದ್ದು ಇದೀಗ ಪುಟ್ಟಣ್ಣ ಅವರೇ ಗೆಲುವು ಸಾಧಿಸಿದ್ದಾರೆ.
ಈ ಹಿಂದೆ ಮೂರು ಬಾರಿ ಜೆ.ಡಿ.ಎಸ್. ನಿಂದ ಮತ್ತು ಒಂದು ಬಾರಿ ಬಿ.ಜೆ.ಪಿ.ಯಿಂದ ಎಂ.ಎಲ್.ಸಿ. ಆಗಿದ್ದ ಪುಟ್ಟಣ್ಣ 2023ರಲ್ಲಿ ಕಾಂಗ್ರೇಸ್ ಸೇರ್ಪಡೆಯಾಗಿದ್ದರು. ಇದೀಗ ಕಾಂಗ್ರೇಸ್ ಪಕ್ಷದಲ್ಲಿಯೂ ಅವರು ತಮ್ಮ ಗೆಲುವಿನ ನಾಗಾಲೋಟ ಮುಂದುವರಿಸಿ ಐದನೇ ಬಾರಿ ವಿಧಾನಪರಿಷತ್ ಪ್ರವೇಶಿಸಿದ್ದಾರೆ.



