ಅಕ್ರಮ ಭೂ ಮಂಜೂರಾತಿಯಿಂದಾಗಿ ಮೂಡಿಗೆರೆ ತಾಲೂಕಿನಲ್ಲಿ ಸ್ಮಶಾನ, ನಿವೇಶನಕ್ಕೆ ಭೂಮಿ ಕೊರತೆ ಉಂಟಾಗಿದೆ. ಹಾಗಾಗಿ ಅಕ್ರಮ ಭೂ ಮಂಜೂರಾತಿಯಾಗಿರುವ ಎಲ್ಲಾ ಭೂಮಿಯನ್ನು ಸರಕಾರ ವಶಪಡಿಸಿಕೊಳ್ಳುವಂತೆ ನ್ಯಾಯಾಲಯದ ಮೊರೆ ಹೋಗಲು ಭೂಹೀನ ಬಡವರ ಐಕ್ಯತಾ ಒಕ್ಕೂಟ ನಿರ್ಧರಿಸಿದೆ ಎಂದು ಒಕ್ಕೂಟದ ಮುಖಂಡ ರಮೇಶ್ ಕೆಳಗೂರು ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಕಾರ ತಾಲೂಕಿನಲ್ಲಾಗಿರುವ ಅಕ್ರಮ ಭೂ ಮಂಜೂರು ಬಗ್ಗೆ ತನಿಖಾ ತಂಡದ ಮೂಲಕ ವರದಿ ಪಡೆದುಕೊಂಡು, ಅಕ್ರಮ ಭೂ ಮಂಜೂರಾಗಿದ್ದ ಅರ್ಜಿಗಳನ್ನು ವಜಾಗೊಳಿಸಿರುವುದು ಸ್ವಾಗತಾರ್ಹ. ಇತ್ತೀಚೆಗೆ ವಿಧಾನಸಭಾ ಅಧಿವೇಶನದಲ್ಲಿ ತಾಲೂಕಿನಲ್ಲಿ 30572 ಎಕರೆ ಕಂದಾಯ ಇಲಾಖೆಯ ಸರಕಾರಿ ಜಮೀನು ಇದೆ. ಅದರಲ್ಲಿ 10785 ಎಕರೆ ಅಕ್ರಮ ಭೂ ಮಂಜೂರಾತಿಯಾಗಿದೆ ಎಂದು ಸರಕಾರವೇ ಹೇಳಿದೆ. ಇಷ್ಟೆಲ್ಲಾ ಸರಕಾರಿ ಭೂಮಿ ಇದ್ದರೂ ಬಡವರಿಗೆ ಸ್ಮಶಾನ, ನಿವೇಶನ ನೀಡಲು ಸಾಧ್ಯವಾಗಿಲ್ಲ. ಹಿಂದೆ ನಿವೇಶನ ಹಾಗೂ ಸ್ಮಶಾನಕ್ಕೆ ಮೀಸಲಿರಿಸಿದ್ದ ಜಮೀನು ಹಾಗೂ ದರಖಾಸ್ತು ಭೂಮಿಯ ದಾಖಲೆ ನಾಶಪಡಿಸಿ ದಲ್ಲಾಳಿಗಳು ಅಧಿಕಾರಿಗಳ ಮೂಲಕ ಹಾಗೂ ಉಳ್ಳವರಿಗೆ ಖಾತೆ ಮಾಡಿಸಿಕೊಟ್ಟಿದ್ದಾರೆಂದು ಆರೋಪಿಸಿದರು.
ತಾಲೂಕಿನಲ್ಲಿ 17000 ಬಿಪಿಎಲ್ 4000 ಎಪಿಎಲ್ ಕಾರ್ಡ್‍ದಾರರಿದ್ದಾರೆ. ಸರಕಾರ ಈ ಅಕ್ರಮ ಭೂ ಮಂಜೂರಾತಿ ಮಾಡಿಕೊಂಡಿರುವ ಅರ್ಜಿಗಳನ್ನು ವಜಾ ಮಾಡಿ, ಎಲ್ಲಾ ಭೂಮಿ ವಶಪಡೆದುಕೊಂಡು ತಾಲೂಕಿನಲ್ಲಿರುವ ಎಲ್ಲಾ ಬಡವರಿಗೆ ತಲಾ 2 ಎಕರೆ ಭೂಮಿ ನೀಡಬೇಕು. ಅಕ್ರಮ ಭೂ ಮಂಜೂರು ಬಗ್ಗೆ ಸಮಗ್ರ ತನಿಖೆ ನಡೆಸಿ, ದಲ್ಲಾಳಿ ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈಗಾಗಲೇ ತಾಲೂಕಿನಲ್ಲಿ ಅಕ್ರಮವಾಗಿ ಹೊರ ಜಿಲ್ಲೆ ಹಾಗೂ ರಾಜ್ಯದ ಜನರಿಗೆ ಭೂಮಿ ಮಂಜೂರು ಮಾಡಿಕೊಟ್ಟಿದ್ದಾರೆ. ಅಲ್ಲದೇ ನೂರಾರು ಎಕರೆ ಭೂಮಿ ಉಳ್ಳವರಿಗೂ ಭೂಮಿ ಮಂಜೂರು ಮಾಡಿಕೊಡಲಾಗಿದೆ. ಈ ಎಲ್ಲಾ ಅಕ್ರಮದ ಬಗ್ಗೆ ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡದ ಕಾರಣ, ಅಕ್ರಮ ಭೂ ಮಂಜೂರಾದವರಿಗೆ ನ್ಯಾಯಾಲಯ ತಡೆಯಾಜ್ಞೆ ನೀಡುತ್ತಿದೆ. ಅಕ್ರಮ ಭೂ ಮಂಜೂರು ಬಗ್ಗೆ ಕಲೆ ಹಾಕಿರುವ ಮಾಹಿತಿ ಹಾಗೂ ದಾಖಲೆಯನ್ನು ಇತ್ತೀಚೆಗೆ ಜಿಲ್ಲಾಧಿಕಾರಿಗಳಿಗೆ ನೀಡಿದ್ದು, ಜತೆಗೆ ನ್ಯಾಯಾಲಯದಲ್ಲೂ ಕೂಡ ಕಾನೂನು ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಒಕ್ಕೂಟದ ಮುಖಂಡ ಶಿವಪ್ರಸಾಧ್ ಭಾರತೀಬೈಲ್, ಕೆ.ಕೆ.ಕೃಷ್ಣಪ್ಪ ಬಿಳಗುಳ. ಜಗದೀಶ್ ಭಾರತೀಬೈಲ್, ಸಂತೋಷ್ ಕಮ್ಮರಗೂಡು, ಹರೀಶ್ ಕೆಲ್ಲೂರು, ರಾಜೇಶ್ ಕಮ್ಮರಗೂಡು, ಉಮೇಶ್ ಘಟ್ಟದಹಳ್ಳಿ, ಚಂದ್ರು ದೇವರಮಕ್ಕಿ, ಶೇಖರ್ ಜಿ.ಹೊಸಳ್ಳಿ ಉಪಸ್ಥಿತರಿದ್ದರು.



