ಶಾಲಾ ಶಿಕ್ಷಣ ಇಲಾಖೆ, ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ಕೆ.ಎಂ.ಎಫ್ ಸಂಸ್ಥೆ ಸಹಭಾಗಿತ್ವದಲ್ಲಿ ಸರ್ಕಾರಿ/ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಸಾಯಿ ಶ್ಯೂರ್ ರಾಗಿಹೆಲ್ತ್ ಮಿಕ್ಸ್ ಹಾಲಿನೊಂದಿಗೆ ಮಿಶ್ರ ಗೊಳಿಸಿ ನೀಡುವ ನೂತನ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ.
ಈ ಸಂಬಂಧ ಇಂದು ರಾಜ್ಯದಾದ್ಯಂತ ಈ ಯೋಜನೆಗೆ ಚಾಲನೆ ನೀಡಲಾಯಿತು. ಮೂಡಿಗೆರೆ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಕಾರ್ಯಕ್ರಮವನ್ನು ಮಾಜಿ ಸಚಿವರಾದ ಶ್ರೀಮತಿ ಡಾ.ಮೋಟಮ್ಮ ನವರು ಉದ್ಘಾಟಿಸಿದರು. ಸರ್ಕಾರ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಹಲವು ಯೋಜನೆಗಳನ್ನು ತರುತ್ತಿದ್ದು ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡು ಓದಿನಲ್ಲಿ ಸಾಧನೆಮಾಡಿ ಉತ್ತಮ ಪ್ರಜೆಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಯೋಜನೆಯ ಕುರಿತು ಅಕ್ಷರ ದಾಸೋಹ ಸಹ ನಿರ್ದೇಶಕರಾದ ಉದಯಕುಮಾರ್ ರವರು ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಎಸ್.ಡಿ.ಎಂ ಸಿ ಅಧ್ಯಕ್ಷರಾದ ಕೃಷ್ಣಕುಮಾರ್, ಪಟ್ಟಣ ಪಂಚಾಯತಿ ಸದಸ್ಯರಾದ ಹೊಸಕೇರೆ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೇಮಂತಚಂದ್ರ, ದೈಹಿಕ ಪರಿವೀಕ್ಷಣಾಧಿಕಾರಿಗಳಾದ ಶ್ರೀನಿವಾಸ್, ಶಿಕ್ಷಕರ ಸಂಘದ ಅಧ್ಯಕ್ಷರಾದ ಪುಟ್ಟರಾಜು, ಕಾರ್ಯದರ್ಶಿ ನವೀನ್ ಹಾಗೂ ಮುಖ್ಯ ಶಿಕ್ಷಕರಾದ ರಾಜೇಶ್ ಇದ್ದರು.
ಕಾರ್ಯಕ್ರಮದಲ್ಲಿ ಸಿ.ಆರ್.ಪಿ ಗಳು, ಬಿ.ಆರ್.ಪಿಗಳು, ಸಹಶಿಕ್ಷಕರು ,ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಸುಧಾಕರ್ ನಿರೂಪಿಸಿದರು, ನೇಮಿರಾಜ್ ವಂದಿಸಿದರು.



