ಭಾನುವಾರ ಚಿಕ್ಕಮಗಳೂರು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಭಾನುವಾರ ಸಂಜೆ ಜಿಲ್ಲೆಯ ಆಲ್ದೂರು ಹೋಬಳಿಯ ಅನೇಕ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಮತ್ತೆ ಕೆಲವೆಡೆ ತುಂತುರು ಮಳೆಯಾಗಿದೆ.
ಆಲ್ದೂರು ಬಾಳೆಹೊನ್ನೂರು ರಸ್ತೆಯಲ್ಲಿ ಬರುವ ಹಲವು ಗ್ರಾಮಗಳಲ್ಲಿ ಮಳೆಯಾಗಿದೆ. ಪ್ರಮುಖವಾಗಿ ಕಣತಿ, ಬಸರವಳ್ಳಿ, ಹುಣಸೆಹಳ್ಳಿ, ಪುರ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.
ಸ್ಥಳೀಯರು ನೀಡಿರುವ ಮಾಹಿತಿಯಂತೆ ಆಲ್ದೂರು ಹೋಬಳಿಯ ಬಸರವರಳ್ಳಿ 1.5 ಇಂಚು, ಪುರದಲ್ಲಿ 1 ಇಂಚು, ಹುಣಸೆಹಳ್ಳಿ 75 ಸೆಂಟ್ಸ್, ನರುಡಿ 1.15 ಇಂಚು ಮಳೆಯಾಗಿದೆ. ಈ ಭಾಗದ ಕಾಫಿ ಬೆಳೆಗಾರರು ಮಳೆಯನ್ನು ಕಂಡು ಹಿಗ್ಗಿದ್ದಾರೆ.
ಬೆರಣಗೋಡು, ಬೆಟ್ಟದಮಳಲಿ, ಬಿಕ್ಕರಣೆ ಗ್ರಾಮಗಳಲ್ಲಿ ತುಂತುರು ಮಳೆಯಾಗಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಮತ್ತೆ ಮಳೆಯಾಗದೇ ಇದ್ದರೆ ಕಾಫಿ ಅರ್ಧಂಬರ್ಧ ಹೂವಾಗಿ ಮುಂದಿನ ವರ್ಷದ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಹವಾಮಾನ ಇಲಾಖೆಯ ಮೂನ್ಸೂಚನೆ ಪ್ರಕಾರ ಮಾರ್ಚ್ 18 ರಿಂದ ಐದು ದಿನಗಳ ಕಾಲ ರಾಜ್ಯದ ದಕ್ಷಿಣ ಮತ್ತು ಉತ್ತರ ಒಳನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ಇದರಿಂದ ರೈತರಲ್ಲಿ ಮತ್ತಷ್ಟು ಭರವಸೆ ಮೂಡಿದ್ದು, ಕುಡಿಯುವ ನೀರಿನ ಮತ್ತು ವಿದ್ಯುತ್ ಕೊರೆತೆಗೆ ಬ್ರೇಕ್ ಬೀಳಬಹುದೇ ಎಂಬ ನಿರೀಕ್ಷೆ ಜನರದ್ದಾಗಿದೆ.



