ಗುರುವಾರ ಕಾಂಗ್ರೇಸ್ ಪಕ್ಷ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರ ಸೇರಿದಂತೆ ರಾಜ್ಯದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ನಿರೀಕ್ಷೆಯಂತೆ ಜಯಪ್ರಕಾಶ್ ಹೆಗ್ಡೆಯವರ ಹೆಸರು ಘೋಷಣೆಯಾಗಿದೆ. ಇತ್ತೀಚೆಗೆ ತಾನೇ ಬಿ.ಜೆ.ಪಿ. ತೊರೆದು ಕಾಂಗ್ರೇಸ್ ಪಕ್ಷ ಸೇರಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಈಗ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಈ ಹಿಂದೆಯೂ ಒಮ್ಮೆ ಕಾಂಗ್ರೇಸ್ ಪಕ್ಷದಿಂದ ಸಂಸದರಾಗಿದ್ದ ಜಯಪ್ರಕಾಶ್ ಹೆಗ್ಡೆ, ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದಾರೆ. ಕ್ಷೇತ್ರದಲ್ಲಿ ಅನೇಕ ಮಂದಿ ಕಾಂಗ್ರೇಸ್ ಟಿಕೆಟ್ ಗಾಗಿ ಆಕಾಂಕ್ಷಿಗಳಿದ್ದರು. ಆದರೆ ಹೈಕಮಾಂಡ್ ಅಳೆದು ತೂಗಿ ಕೊನೆಗೆ ಜಯಪ್ರಕಾಶ್ ಹೆಗ್ಡೆಯವರಿಗೆ ಮಣೆ ಹಾಕಿದೆ. ಇದರೊಂದಿಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿ.ಜೆ.ಪಿ.ಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೇಸ್ ನ ಜಯಪ್ರಕಾಶ್ ಹೆಗ್ಡೆಯವರ ನಡುವೆ ನೇರಾನೇರ ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ಇದರೊಂದಿಗೆ ಇಂದಿನಿಂದ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲಿವೆ.
ಚಿತ್ರದುರ್ಗ ಕ್ಷೇತ್ರದಿಂದ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಅವರು ಅಭ್ಯರ್ಥಿಯಾಗಿದ್ದಾರೆ. ಈ ಹಿಂದೆ 2014ರಲ್ಲಿ ಚಿತ್ರದುರ್ಗ ಸಂಸದರಾಗಿ ಆಯ್ಕೆಯಾಗಿದ್ದ ಚಂದ್ರಪ್ಪ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಇದೀಗ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಬಿ.ಎನ್. ಚಂದ್ರಪ್ಪ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಮೂಲದವರಾಗಿದ್ದು ಈ ಹಿಂದೆ ಎರಡು ಬಾರಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು.
ಇತ್ತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಪದ್ಮರಾಜ್ ರಾಮಯ್ಯ ಅವರನ್ನು ಕಾಂಗ್ರೇಸ್ ಕಣಕ್ಕಿಳಿಸಿದೆ. ವಕೀಲರಾಗಿರುವ ಮತ್ತು ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಳದ ಉಸ್ತುವಾರಿ ನಿರ್ವಹಿಸುತ್ತಿರುವ ಪದ್ಮರಾಜ್ ಅವರು ಕ್ಷೇತ್ರದಲ್ಲಿ ಸಾಕಷ್ಟು ಚಿರಪರಿಚಿತರಾಗಿದ್ದಾರೆ. ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಾಳೂರಿನವರು ಎಂಬುದು ವಿಶೇಷವಾಗಿದೆ.



