ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಕಟ್ಟುನಿಟ್ಟನ ಕ್ರಮ ವಹಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಮತ್ತು ಚಿಕ್ಕಮಗಳೂರು ಉಪವಿಭಾಗಾಧಿಕಾರಿ ದಲ್ಜೀತ್ ಕುಮಾರ್ ಹೇಳಿದರು.
ಅವರು ಸೋಮವಾರ ಮೂಡಿಗೆರೆ ತಾಲೂಕು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಚಿಕ್ಕಮಗಳೂರಿನ 4, ಮೂಡಿಗೆರೆ 4, ಕಳಸ 1 ಸೇರಿದಂತೆ ಒಟ್ಟು 9 ಹೋಬಳಿ ವ್ಯಾಪ್ತಿಯಲ್ಲಿ 231 ಮತಗಟ್ಟೆಗಳಿವೆ. ಅಲ್ಲಿ ಮತದಾನ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಯಲು ಪೂರ್ವ ಸಿದ್ಧತೆ ನಡೆದಿದೆ. 25 ಸೆಕ್ಟರ್ ಅಧಿಕಾರಿ, 4 ಪ್ಲೈಯಿಂಗ್ ಸ್ಕ್ವಾಡ್, 1 ವಿಎಸ್‍ಟಿ, 1 ವಿವಿಟಿ, 1 ಅಕೌಂಟಿಂಗ್ ತಂಡ ಕಾರ್ಯ ನಿರ್ವಹಿಸುತ್ತಿದೆ. 5 ಚೆಕ್‍ಪೋಸ್ಟ್‍ಗಳಲ್ಲಿ ನಡೆಯುವ ಎಲ್ಲಾ ಘಟನೆ ವೀಕ್ಷಿಸಲು ಸಿಸಿ ಟಿವಿ ಮೂಲಕ ನೇರ ದರ್ಶನದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಕ್ರಮ ವಸ್ತು, ನಗದು ವಶಪಡಿಸಿಕೊಂಡ ಬಗ್ಗೆ ಇಎಸ್‍ಎಂಎಸ್‍ಗೆ ಮಾಹಿತಿ ಹಾಕಲಾಗುವುದು ಎಂದು ಹೇಳಿದರು.
ಕ್ಷೇತ್ರದಲ್ಲಿ 23 ಸೂಕ್ಮ ಪ್ರದೇಶವಿದ್ದು, ಮೂಡಿಗೆರೆ 1, ಕಳಸದಲ್ಲಿ 4 ಅತಿಸೂಕ್ಮ ಪ್ರದೇಶವೆಂದು ಗುರುತಿಸಲಾಗಿದೆ. ಕಾಡಾನೆ ಸೇರಿದಂತೆ ಕಾಡು ಪ್ರಾಣಿ ಹಾವಳಿ ಹೆಚ್ಚಾಗಿದ್ದರಿಂದ ಅಂತಹ ಸ್ಥಳಕ್ಕೆ ಅರಣ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಮೂಡಿಗೆರೆ ಕ್ಷೇತ್ರದಲ್ಲಿ ಇಲ್ಲಿಯವರೆಗೆ 88668 ಪುರುಷರು, 87527 ಮಹಿಳೆಯರು, 5 ಇತರೇ ಸೇರಿದಂತೆ ಒಟ್ಟು 176200 ಮತದಾರರಿದ್ದು ಇನ್ನು ಸೇರ್ಪಡೆ ನಡೆಯುತ್ತಿದೆ.
ಮತಗಟ್ಟೆಗೆ ಬಂದು ಮತದಾನ ಮಾಡಲು ಸಾಧ್ಯವಾಗದ 85 ವರ್ಷ ಮೇಲ್ಪಟ್ಟ ವಯೋವೃದ್ಧರು ಹಾಗೂ ವಿಶೇಷಚೇತನರಿಗೆ 12-ಡಿ ನಮೂನೆ ನೀಡಿ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಚುನಾವಣೆ ಅಕ್ರಮ ಹಾಗೂ ಎಂಸಿಸಿ ಉಲ್ಲಂಘನೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ದೂರುಗಳಿದ್ದರೆ ಸಾರ್ವಜನಿಕರು 18004256114 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಹೇಳಿದರು. ಇದಕ್ಕೂ ಮುನ್ನ ವೀಡಿಯೋ ತಂಡಕ್ಕೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಮೂಡಿಗೆರೆ ತಹಸೀಲ್ದಾರ್ ಶೈಲೇಶ್ ಎಸ್.ಪರಮಾನಂದ ಉಪಸ್ಥಿತರಿದ್ದರು.



