ಮೂಡಿಗೆರೆ ಪಟ್ಟಣದ ಜೆ.ಎಂ. ರಸ್ತೆಯಲ್ಲಿ ಭಾನುವಾರ ಟ್ರಾಫಿಕ್ ಸಮಸ್ಯೆ ಉಂಟಾಗಿ ಸುಮಾರು 2 ಗಂಟೆ ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ವಾಹನ ಸವಾರರು ಹಿಡಿಶಾಪ ಹಾಕುವ ದೃಶ್ಯ ಕಂಡು ಬಂದಿತು.
ಪ.ಪಂ. ವ್ಯಾಪ್ತಿಯ ಜೆ.ಎಂ.ರಸ್ತೆ, ಎಂ.ಜಿ ರಸ್ತೆ, ತತ್ಕೋಳ ರಸ್ತೆ ಸೇರಿದಂತೆ ಅನೇಕ ರಸ್ತೆಗಳು ಕಿರಿದಾಗಿವೆ. ಕೆಲ ವಾಹನ ಮಾಲೀಕರು ತಮ್ಮ ವಾಹನಗಳನ್ನು ರಸ್ತೆಯಲ್ಲಿಯೇ ತಿಂಗಳುಗಟ್ಟಲೆ ನಿಲ್ಲಿಸುತ್ತಿದ್ದರಿಂದ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಇದರಿಂದ ಪ್ರತಿನಿತ್ಯ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.
ತತ್ಕೋಳ ರಸ್ತೆಯಲ್ಲಿ ಶಾಲೆ ಬಿಡುವ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಆಗುವುದು ನಿತ್ಯದ ಗೋಳಾಗಿದೆ. ಅಲ್ಲದೇ ಜೆ.ಎಂ.ರಸ್ತೆಯಲ್ಲಿ ಎರಡು ಮದುವೆ ಮಂಟಪಗಳಿದ್ದು, ವಾಹನ ಪಾರ್ಕಿಂಗ್ ಸಮಸ್ಯೆಯಿಂದ ಮದುವೆ ನಡೆಯುವ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ತೀವ್ರ ರೀತಿಯಲ್ಲಿ ತೊಂದರೆ ಉಂಟಾಗುತ್ತಿದೆ.
ಭಾನುವಾರ ಜೆ.ಎಂ.ರಸ್ತೆಯಲ್ಲಿರುವ ಮದುವೆ ಮಂಟಪವೊಂದರಲ್ಲಿ ವಿವಾಹ ನಡೆದಿದ್ದು, ರಸ್ತೆ ಬದಿಯಲ್ಲಿ ಕಟ್ಟಡ ಮಾಲೀಕರು ತಮ್ಮ ವಾಹನಗಳನ್ನು ತಿಂಗಳುಗಟ್ಟಲೆ ನಿಲ್ಲಿಸುವುದರಿಂದ ಟ್ರಾಫಿಕ್ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತು. ಪೊಲೀಸರು ಕೇವಲ ಮುಖ್ಯ ರಸ್ತೆಯಲ್ಲಿ ಮಾತ್ರ ಟ್ರಾಫಿಕ್ ಸಮಸ್ಯೆ ತಿಳಿಗೊಳಿಸುತ್ತಿದ್ದಾರೆ ಹೊರತು, ಪಟ್ಟಣ ಜೆ.ಎಂ ರಸ್ತೆ ಮತ್ತು ತತ್ಕೋಳ ರಸ್ತೆಯಲ್ಲಿ ನಿತ್ಯ ಟ್ರಾಫಿಕ್ ಸಮಸ್ಯೆ ಬಗ್ಗೆ ಗಮನ ಹರಿಸದ ಕಾರಣ ಈ ಸಮಸ್ಯೆಗೆ ಪರಿಹಾರ ಸಿಗದಂತಾಗಿದೆ. ಹಾಗಾಗಿ ನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುವ ಎಂಜಿ ರಸ್ತೆ, ಜೆಎಂ ರಸ್ತೆ ಮತ್ತು ತತ್ಕೋಳ ರಸ್ತೆಯಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪೊಲೀಸ್ ಇಲಾಖೆ ಕ್ರಮ ವಹಿಸಸಬೇಕು. ಸದಾ ರಸ್ತೆಬದಿಯಲ್ಲಿ ವಾಹನಗಳನ್ನು ನಿಲ್ಲಿಸುವವರ ವಿರುದ್ಧ ಕ್ರಮ ಜರುಗಿಸಬೇಕು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಈ ಬಗ್ಗೆ ಗಮನ ಹರಿಸಬೇಕೆಂಬುದು ಸಾರ್ವಜನಿಕರು ಆಗ್ರಹಸಿದ್ದಾರೆ.



