ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವವರ ಕೊಲೆ ಪ್ರಕರಣದಲ್ಲಿ ಖ್ಯಾತ ನಟ ದರ್ಶನ್ ಸೇರಿ 10 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಇಂದು ಬೆಳಗ್ಗೆ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಅವರನ್ನು ವಶಕ್ಕೆ ಪಡೆಯಲಾಗಿದೆ. ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಎಂಬಾತ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದನು. ಈ ಕಾರಣಕ್ಕೆ ನಟ ದರ್ಶನ್ ಸೂಚನೆ ಮೇರೆಗೆ ಅವರ ಗೆಳೆಯರು ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ರೇಣುಕಾಸ್ವಾಮಿ ಪೋಷಕರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹಿನ್ನೆಲೆ: ನಟ ದರ್ಶನ್ ಪವಿತ್ರಾ ಗೌಡ ಎಂಬಾಕೆ ಜೊತೆ ಆಪ್ತವಾಗಿದ್ದು, ಈ ಬಗ್ಗೆ ಪವಿತ್ರಾ ಗೌಡ ಕೆಲ ಸಮಯ ಹಿಂದೆ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಖಾರವಾಗಿ ಆಕ್ಷೇಪ ವ್ಯಕ್ತಪಡಿಸಿ ನಂತರ ಸೋಷಿಯಲ್ ಮೀಡಿಯಾ ಮೂಲಕ ಇಬ್ಬರೂ ಕಿತ್ತಾಡಿಕೊಂಡಿದ್ದು ಸುದ್ದಿಯಾಗಿತ್ತು.
ಈ ಘಟನೆ ನಂತರ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತ ಅಶ್ಲೀಲ ಮೇಸೆಜ್ ಮಾಡಿದ್ದನು ಎಂದು ಹೇಳಲಾಗಿದೆ. ಇದರಿಂದ ಕೆರಳಿದ ದರ್ಶನ್ ಮತ್ತು ಅವರ ಸ್ನೇಹಿತರು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತಂದು ಕಾಮಾಕ್ಷಿಪಾಳ್ಯದಲ್ಲಿ ಆತನ ಮೇಲೆ ಹಲ್ಲೆ ನಡೆಸಿದ್ದರು. ನಂತರ ರೇಣುಕ ಸ್ವಾಮಿಯನ್ನು ಕೊಲೆ ಮಾಡಿ ಆತನ ಹೆಣವನ್ನು ಮೋರಿಗೆ ಎಸೆದು ಹೋಗಿದ್ದರು. ಈ ಘಟನೆ ನಡೆದಿದ್ದು ಮೊನ್ನೆ ಜೂನ್ 9ರಂದು.
ಮೋರಿಯಲ್ಲಿ ತೇಲುತ್ತಿದ್ದ ಶವವನ್ನು ಬೀದಿನಾಯಿಗಳು ಕಚ್ಚಿ ಎಳೆದುತಂದಾಗಲೇ ಶವ ಪತ್ತೆಯಾಗಿದ್ದು. ಮೊನ್ನೆ ಭಾನುವಾರ ಶವ ಪತ್ತೆಯಾಗಿತ್ತು. ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಾ ಹೋದಾಗ ಪ್ರಕರಣದಲ್ಲಿ ದರ್ಶನ್ ಪಾತ್ರವಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ನಟ ದರ್ಶನ್ ಸೂಚನೆ ಮೇರೆಗೆ ಕೊಲೆ ಮಾಡಿದ್ದಾಗಿ ನಾಲ್ವರು ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ದರ್ಶನ್ ಕೂಡ ಇದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ದರ್ಶನ್ ಸೇರಿ 10 ಜನರನ್ನು ವಶಕ್ಕೆ ಪಡೆಯಲಾಗಿದೆ.
ಚಿತ್ರದುರ್ಗದಿಂದ ರೇಣುಕಾ ಸ್ವಾಮಿ ಬೆಂಗಳೂರಿಕೆ ಕರೆದುಕೊಂಡು ಬರಲಾಗಿತ್ತು. ವಿನಯ್ ಎನ್ನುವವರಿಗೆ ಸೇರಿದ ಶೆಡ್ನಲ್ಲಿ ಅವರನ್ನು ಇರಿಸಲಾಗಿತ್ತು. ಈ ವೇಳೆ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಲಾಗಿದೆ. 4 ಜನ ಹಲ್ಲೆ ಮಾಡಿದ ತಂಡದಲ್ಲಿ ದರ್ಶನ್ ಇದ್ದ ಬಗ್ಗೆ ಮಾಹಿತಿ ಇದೆ. ಹತ್ಯೆ ಮಾಡಿ ಮೃತದೇಹವನ್ನು ಮೋರಿಯಲ್ಲಿ ಎಸೆದು ಹೋಗಲಾಗಿತ್ತು. ವಿಜಯನಗರ ACP ಚಂದನ್ ತಂಡದಿಂದ ದರ್ಶನ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಹೇಳಿದ್ದೇನು?
ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಎನ್ನುವವರು ಅಸಭ್ಯವಾಗಿ ಮೆಸೇಜ್ ಮಾಡಿದ್ದರು. ದರ್ಶನ್ ನಿರ್ದೇಶನದ ಮೇರೆಗೆ ರೇಣುಕಾಸ್ವಾಮಿ ಅವರನ್ನು ಕಾಮಾಕ್ಷಿಪಾಳ್ಯದ ಶೆಡ್‌ಗೆ ಕರೆದುಕೊಂಡು ಬಂದು ಬಲವಾಗಿ ಹೊಡೆಯಲಾಗಿತ್ತಂತೆ. ಆ ಟೈಮ್‌ನಲ್ಲಿ ಅಲ್ಲಿ ದರ್ಶನ್, ಪವಿತ್ರಾ ಗೌಡ ಅವರು ಇದ್ದರು ಎಂದು ಆರೋಪಿಗಳು ಹೇಳಿದ್ದಾರಂತೆ. ಆ ವ್ಯಕ್ತಿ ತೀರಿಕೊಂಡ ಬಳಿಕ ಕಾಮಾಕ್ಷಿಪಾಳ್ಯದ ಡ್ರೈನೇಜ್‌ನಲ್ಲಿ ಶವವನ್ನು ಎಸೆಯಲಾಗಿದೆ. ಆ ಕೊಲೆಗೆ ಸಂಬಂಧಪಟ್ಟಂತೆ 9 ಜನರನ್ನು ವಿಚಾರಣೆ ಮಾಡಲಾಗಿತ್ತು. ಆಗ ಅವರು ದರ್ಶನ್ ಹೆಸರನ್ನು ಬಾಯಿ ಬಿಟ್ಟಿದ್ದರು. ಒಂದಷ್ಟು ಸಾಕ್ಷಿಗಳನ್ನು ಸಂಗ್ರಹ ಮಾಡಿದ ನಂತರದಲ್ಲಿ ಈಗ ಮೈಸೂರಿನ ದರ್ಶನ್ ಅವರ ತೂಗುದೀಪ ಫಾರ್ಮ್‌ಹೌಸ್‌ನಿಂದ ಅವರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ.
ಕೊಲೆಯಾದ ರೇಣುಕಾಸ್ವಾಮಿ ದರ್ಶನ್ ಅಭಿಮಾನಿ ಆಗಿದ್ದ ಎನ್ನುವ ಮಾಹಿತಿ ಇದೆ. ದರ್ಶನ್, ವಿಜಯಲಕ್ಷ್ಮೀ ಸಂಸಾರ ಬಗ್ಗೆ ಯೋಚನೆ ಮಾಡ್ತಿದ್ದ ಸ್ವಾಮಿ. ದಂಪತಿ ಸಂಸಾರದಲ್ಲಿ ಪವಿತ್ರಾಗೌಡ ಬರುತ್ತಿದ್ದಾರೆಂದು ತಿಳಿದು ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ ಎನ್ನಲಾಗಿದೆ.



