ಒಂಟಿ ಮನೆಯೊಂದಕ್ಕೆ ನುಗ್ಗಿ ಒಡವೆ ಹಣ ಕಳ್ಳತನ ಮಾಡಿದ್ದ ಆರೋಪಿಯನ್ನು ಬಣಕಲ್ ಪೊಲೀಸರು ಬಂಧಿಸಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾ ವ್ಯಾಪ್ತಿಯ ಬೆಟ್ಟಗೆರೆ ಸಮೀಪದ ಜಾರಗಲ್ ಗ್ರಾಮದ ತೋಟದ ಒಂಟಿ ಮನೆಯಲ್ಲಿ ವಾರಿಜ ಎಂಬುವವರ ಮನೆಯಲ್ಲಿ ಜೂನ್ 12ರಂದು ಹಾಡಹಗಲೇ ಮನೆ ಕಳ್ಳತನ ಮಾಡಿದ್ದ ಆರೋಪಿ ಲೋಕೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೂಡಿಗೆರೆ ಸಮೀಪದ ಹಳೇಕೋಟೆ ಗ್ರಾಮದ ಲೋಕೇಶ್ ಎಂಬಾತ ಬಂಧಿತ ಆರೋಪಿ.
ವಾರಿಜ ಅವರ ಮನೆಯ ಬೀಗ ಮುರಿದು ಒಳನುಗ್ಗಿದ್ದ ಆರೋಪಿ ಮನೆಯೊಳಗಿದ್ದ ಕತ್ತಿಯನ್ನು ಬಳಸಿ ಗಾದ್ರೇಜ್ ಬೀಗವನ್ನು ಒಡೆದು ಬೀರುವಿನಲ್ಲಿದ್ದ 21.6 ಗ್ರಾಂ ತೂಕದ ಚಿನ್ನದ ನೆಕ್ಲೇಸ್, 6 ಗ್ರಾಂ ತೂಕದ ಚಿನ್ನದ ಓಲೆಗಳು, 1500 ರೂ. ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ವಾರಿಜ ಅವರು ಬಣಕಲ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ಬೆನ್ನು ಹತ್ತಿದ ಬಣಕಲ್ ಪೊಲೀಸರು ನಾಲ್ಕೇ ದಿನದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಯಿಂದ ಕಳ್ಳತನ ಮಾಡಿದ್ದ ಚಿನ್ನಾಭರಣ ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಸೋಮೇಗೌಡ ಮಾರ್ಗದರ್ಶನದಲ್ಲಿ ಬಣಕಲ್ ಠಾಣಾಧಿಕಾರಿ ಕೌಸಿಕ್ ಬಿ.ಸಿ. ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


