ಬಸ್ ಇಳಿದು ಮನೆಗೆ ತೆರಳುವ ವೇಳೆ ವಿದ್ಯುತ್ ಕಂಬ ತಲೆಯ ಮೇಲೆ ಬಿದ್ದು ಯುವಕನೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಸಾರಗೋಡು ಗ್ರಾಮದಲ್ಲಿ ನಡೆದಿದೆ.
ಭಾನುವಾರ ಸಂಜೆ ಮೂಡಿಗೆರೆಯಿಂದ ಬಸ್ಸಿನಲ್ಲಿ ಬಂದು ಇಳಿದು ತೆರಳುತ್ತಿದ್ದ ವೇಳೆ ವಿದ್ಯುತ್ ಕಂಬ ತುಂಡಾಗಿ ಬೀಳುವ ಸಂದರ್ಭದಲ್ಲಿ ಯುವಕನ ತಲೆಯ ಮೇಲೆ ಬಿದ್ದಿದ್ದು ಯುವಕ ತೀವ್ರವಾಗಿ ಗಾಯಗೊಂಡಿದ್ದಾರೆ.
ಸಾರಗೋಡು ಸಮೀಪದ ತುಂಬರಗಂಡಿ ಎಂಬಲ್ಲಿಯ ಕೃಷಿಕ ಎಸ್.ಪಿ.ದಿವಿನ್ ಭಾನುವಾರ ಸಂಜೆ ಬಸ್ ಇಳಿದು ಇನ್ನೇನು ಮುಂದೆ ಸಾಗಬೇಕು ಎನ್ನುವಾಗ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದು, ಇದರಿಂದ ವಿದ್ಯುತ್ ಕಂಬವೊಂದು ತುಂಡಾಗಿ ಬಿದ್ದಿದ್ದು, ವಿದ್ಯುತ್ ಕಂಬವು ದಿವಿನ್ ಅವರ ತಲೆಮೇಲೆಯೇ ಬಿದ್ದಿದೆ. ತಕ್ಷಣ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಸಹ ವಿದ್ಯುತ್ ಕಂಬ ತಲೆಗೆ ತಗುಲಿ ತೀವ್ರವಾಗಿ ಪೆಟ್ಟಾಗಿದೆ.
ಗಾಯಗೊಂಡ ದಿವಿನ್ ಅವರನ್ನು ಮೂಡಿಗೆರೆ ಆಸ್ಪತ್ರೆಗೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ಆಸ್ಪತ್ರೆಗೆ ಸೇರಿಸಲಾಗಿದೆ. ಅವರಿಗೆ ತೀವ್ರ ಗಾಯವಾಗಿರುವುದರಿಂದ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ಅತೀವ ಮಳೆಯಾಗುತ್ತಿದ್ದು, ಮಳೆಯೊಂದಿಗೆ ವಿಪರೀತ ಗಾಳಿ ಬೀಸುತ್ತಿದೆ. ಗಾಳಿಯಿಂದಾಗಿ ಅನೇಕ ಕಡೆ ಮರಗಳು ನೆಲಕ್ಕುರುಳಿವೆ. ಸಾರಗೋಡು ಗ್ರಾಮದಲ್ಲಿಯೂ ಎರಡು ಮರಗಳು ರಸ್ತೆಗೆ ಉರುಳಿ ಬಿದ್ದಿವೆ. ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದಿರುವುದರಿಂದ ವಿದ್ಯುತ್ ಕಂಬಗಳು ಸಹ ತುಂಡಾಗಿವೆ. ವಿದ್ಯುತ್ ಸಂಚಾರ ವ್ಯತ್ಯಯವಾಗಿದೆ. ಮಾತ್ರವಲ್ಲ ವಿದ್ಯುತ್ ಕಂಬ ದಿವಿನ್ ಎಂಬ ಯುವಕನ ಮೇಲೆ ಬಿದ್ದಿದ್ದು ತೀವ್ರವಾಗಿ ಗಾಯಗೊಳ್ಳುವಂತಾಗಿದ್ದು, ಕೂಡಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೂಕ್ತ ಪರಿಹಾರ ಹಾಗೂ ಚಿಕಿತ್ಸೆಗೆ ಒತ್ತಾಯ
ವಿದ್ಯುತ್ ಕಂಬ ತಲೆಯ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ದಿವಿನ್ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಅವರ ಚಿಕಿತ್ಸೆಗೆ ಮೆಸ್ಕಾಂ ನಿಂದ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.



