ಅತ್ಯಾಚಾರದ ಆರೋಪದ ಮೇಲೆ ಚಿಕ್ಕಮಗಳೂರಿನಲ್ಲಿ ಯೋಗ ಗುರುವೊಬ್ಬರ ಬಂಧನವಾಗಿದೆ. ಪ್ರದೀಪ್ ಉಲ್ಲಾಳ್ (53) ಬಂಧಿತ ಆರೋಪಿ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರದೀಪ್ ಉಲ್ಲಾಳ್ ಮಲ್ಲೇನಹಳ್ಳಿಯ ಬಿಂಡಿಗ ಸಮೀಪ “ಕೇವಲ ಫೌಂಡೇಶನ್” ಹೆಸರಿನಲ್ಲಿ ಯೋಗ ಕೇಂದ್ರ ನಡೆಸುತ್ತಿದ್ದು, ಯೋಗ ಕಲಿಯಲು ಬಂದ ಅನಿವಾಸಿ ಭಾರತೀಯ ವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ದೂರು ದಾಖಲಾಗಿದೆ.
ಕೇವಲ ಫೌಂಡೇಶನ್ ಎಂಬ ಹೆಸರಿನ ಯೋಗ ಕೇಂದ್ರದಲ್ಲಿ ತರಬೇತಿಗೆಂದು ಅಮೇರಿಕಾದ ಕ್ಯಾಲಿಫೋರ್ನಿಯಾದಿಂದ ಅನಿವಾಸಿ ಭಾರತೀಯ ವೈದ್ಯೆಯೊಬ್ಬರು ಬರುತ್ತಿದ್ದರು. ಕಳೆದ 4 ವರ್ಷದಿಂದಲೂ ಯೋಗ ಕಲಿಯಲು ಮಹಿಳೆ ಬರುತ್ತಿದ್ದರು ಎನ್ನಲಾಗಿದೆ.
ಆನ್ ಲೈನ್ ನಲ್ಲಿ ಯೋಗ ಕಲಿಯುತ್ತಿದ್ದ ವೈದ್ಯೆಯನ್ನು ಪುಸಲಾಯಿಸಿ ನೇರವಾಗಿ ಈತನ ಯೋಗ ಕೇಂದ್ರಕ್ಕೆ ಬಂದು ಯೋಗ ಕಲಿಯುವಂತೆ ಕರೆದಿದ್ದ. ವೈದ್ಯೆ ಇಲ್ಲಿಗೆ ಬಂದು ಯೋಗ ಕಲಿಯುವಾಗ ಆಕೆಯೊಂದಿಗೆ ಪ್ರದೀಪ್ ಉಲ್ಲಾಳ ಸಲುಗೆ ಬೆಳೆಸಿಕೊಂಡಿದ್ದು, ಮಹಿಳೆಯು ಈತನೊಂದಿಗೆ ತುಂಬಾ ಸಲುಗೆಯಾಗಿರುವ ಪೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ.

ಯೋಗಗುರು ತನ್ನಂತೆಯೇ ಬೇರೆ ಮಹಿಳೆಯರ ಜತೆಯೂ ಇದೇ ರೀತಿಯ ಸಂಬಂಧ ತಿಳಿದ ಮಹಿಳೆ ಪ್ರದೀಪ್ ಉಲ್ಲಾಳ ಜೊತೆ ಜಗಳವಾಡಿದ್ದರು. ವಿದೇಶಿ ಮಹಿಳೆಯಿಂದ ಯೋಗ ಗುರು ಪ್ರದೀಪ್ ಸುಮಾರು 20 ಲಕ್ಷ ರೂ. ಹಣ ಕಿತ್ತಿದ್ದ ಎಂಬ ಆರೋಪವು ಇದೆ. ಇದೇ ವಿಚಾರವಾಗಿ ಯೋಗ ಗುರು ಹಾಗು ಕ್ಯಾಲಿಫೋರ್ನಿಯಾ ಮಹಿಳೆಗೂ ಜಗಳವಾಗಿತ್ತು.
ಪ್ರದೀಪ್ ಉಲ್ಲಾಳ ತನ್ನ ಮೇಲೆ ನಿರಂತರ ಅತ್ಯಾಚಾರ ನಡೆಸಿದಿದ್ದಾನೆ ಎಂದು ವಿದೇಶಿ ಮಹಿಳೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಗ ಗುರುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯೋಗದ ಹೆಸರಿನಲ್ಲಿ ಅನಾಚಾರ ; ಸಮಗ್ರ ತನಿಖೆಗೆ ಆಗ್ರಹ

ಬಿಂಡಿಗ ಸಮೀಪ ಕೇವಲ ಫೌಂಡೇಶನ್ ಹೆಸರಿನಲ್ಲಿ ಯೋಗ ಕೇಂದ್ರ ತೆರೆದಿರುವ ಪ್ರದೀಪ್ ಉಲ್ಲಾಳ ತಾನು ಹಿಮಾಲಯದಲ್ಲಿ ಯೋಗ ಕಲಿತು ಬಂದಿದ್ದೇನೆ ಎಂದು ಹಿಮಾಲಯನ್ ಕ್ರಿಯಾ ಯೋಗ ಎಂಬ ತನ್ನದೇ ಯೋಗ ಕ್ರಮವನ್ನು ಪ್ರಚುರ ಪಡಿಸಿ ಜನರನ್ನು ಆಕರ್ಷಿಸುತ್ತಿದ್ದ ಎನ್ನಲಾಗಿದೆ. ಹೈಟೆಕ್ ಆಶ್ರಮದ ರೀತಿ ಯೋಗ ಕೇಂದ್ರ ಕಟ್ಟಿರುವ ಈತನ ಬಳಿಗೆ ಯೋಗ ಕಲಿಯಲು ವಿದೇಶದಿಂದ ಹೆಚ್ಚಿನ ಜನರು ಬರುತ್ತಿದ್ದರು ಎನ್ನಲಾಗಿದೆ. ಇಲ್ಲಿಗೆ ಯೋಗ ಕಲಿಯಲು ಬರುವ ಮಹಿಳೆಯರ ಯೋಗಗುರು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆ ಎಂದು ವಿದೇಶಿ ಮಹಿಳೆಯೊಬ್ಬರು ಈಗ ದೂರು ನೀಡಿದ್ದಾರೆ.
ವೈದ್ಯೆ ನೀಡಿರುವ ದೂರಿನ ಮೇಲೆ ಯೋಗಗುರು ಬಂಧನವಾಗಿದೆ. ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸಿ ಯೋಗದ ಹೆಸರಿನಲ್ಲಿ ಈತ ನಡೆಸುತ್ತಿದ್ದ ಅನಾಚಾರಗಳನ್ನು ಬಯಲಿಗೆಳೆಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ



