ಚನ್ನಪಟ್ಟಣ ಉಪಚುನಾವಣೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ. ಪಿ. ಯೋಗೇಶ್ವರ್ ಇದೀಗ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕೆಪಿಸಿಸಿ ಕಛೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ವಾಟ್ಸಪ್ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ವಿಜಯೇಂದ್ರ ಅವರಿಗೆ ರಾಜೀನಾಮೆ ನೀಡಿರುವ ಸಿ.ಪಿ. ಯೋಗೇಶ್ವರ ಕಾಂಗ್ರೆಸ್ ಸೇರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ.ಪಿ ಯೋಗೇಶ್ವರ್ ಅವರಿಗೆ ಡಿ.ಕೆ ಶಿವಕುಮಾರ್ ಕಾಂಗ್ರೇಸ್ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಕಾಂಗ್ರೆಸ್ ಸೇರ್ಪಡೆಯಾದ ನಂತರ ಮಾತನಾಡಿದ ಮಾಜಿ ಸಚಿವ ಯೋಗೇಶ್ವರ್, ಕಳೆದ ಎರಡು ಮೂರು ತಿಂಗಳಿಂದ ನಡೆದ ರಾಜಕೀಯ ಬೆಳವಣಿಗೆಗಳು ನನಗೆ ಅಸಮಾಧಾನ ಮೂಡಿಸಿದವು, ಮೈತ್ರಿ ಆದ ನಂತರದ ವಾತಾವರಣ ನನ್ನ ರಾಜಕೀಯ ಬೆಳವಣಿಗೆಗೆ ಪೂರಕ ವಾತಾವರಣ ಇರಲಿಲ್ಲ, ಕೆಲವೊಮ್ಮೆ ನಮಗೆ ಅಂತ ನಾವು ಕಟ್ಟಿದ ಮನೆಯಲ್ಲಿ ನಾವು ವಾಸ ಮಾಡಲು ಆಗುವುದಿಲ್ಲ, ನಾನು ಯಾವುದೇ ಒತ್ತಡ ಹಾಗೂ ಷರತ್ತು ಇಲ್ಲದೆ ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ, ಈ ಹಿಂದೆ ನಾನು ಡಿ.ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ರಾಜಕೀಯ ಆರಂಭಿಸಿದ್ದೆ. ಈಗ ಮತ್ತೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರುತ್ತೇನೆ. ಇನ್ನು ಮುಂದೆ ಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲರ ಒಟ್ಟುಗೂಡಿ ಕೆಲಸ ಮಾಡುತ್ತೇನೆ ಎಂದರು.
ಗುರುವಾರ ಅವರು ಚನ್ನಪಟ್ಟಣದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲು ತಯಾರಿಯನ್ನು ಸಹ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಎನ್.ಡಿ.ಎ ಟಿಕೆಟ್ ಸಿಗಬಹುದು ಎಂದು ಯೋಗೇಶ್ವರ್ ಕಾದು ಕುಳಿತ್ತಿದ್ದರು. ಆದರೆ, ಬಿಜೆಪಿ ಟಿಕೆಟ್ ಘೋಷಣೆ ಆಗದಿರುವ ಕಾರಣ ಸಿಪಿ ಯೋಗೇಶ್ವರ್ ಇಂದು ಬೆಳಗ್ಗೆ ಬೆಂಗಳೂರಿನ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚಿಸಿದರು. ಬಳಿಕ ಒಂದೇ ಕಾರಿನಲ್ಲಿ ಇಬ್ಬರೂ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಆನಂತರ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ಈಗ್ಗೆ ಎರಡು ದಿನದ ಹಿಂದೆ ಅವರು ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.



