ಮೂಡಿಗೆರೆ ತಾಲ್ಲೂಕಿನ ಜನ್ನಾಪುರ ಸಮೀಪದ ಮಣ್ಣೀಕೆರೆ ಗ್ರಾಮದ ಸಮುದಾಯ ಭವನವನ್ನು ಕಾನೂನು ಬಾಹೀರವಾಗಿ ಗುತ್ತಿಗೆದಾರರೊಬ್ಬರು ಗೋಡಾನ್ ಮಾಡಿಕೊಂಡಿರುವ ಬಗ್ಗೆ ದೂರು ಕೇಳಿಬಂದಿದೆ.
ಈ ಬಗ್ಗೆ ಗ್ರಾಮದ ಸುನಿಲ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಮಣ್ಣೀಕೆರೆ ಗ್ರಾಮದ ಸಮುದಾಯ ಭವನವನ್ನು ಗುತ್ತಿಗೆದಾರರೊಬ್ಬರು ಸಿಮೆಂಟ್ ಮತ್ತು ಪೈಪ್ ಗಳನ್ನು ಸಂಗ್ರಹಿಸಿಡಲು ಬಳಸಿಕೊಳ್ಳುತ್ತಿದ್ದು, ಇದು ಕಾನೂನು ಬಾಹೀರವಾಗಿದೆ. ಸಮುದಾಯ ಭವನ ಗ್ರಾಮದ ಸಾರ್ವಜನಿಕ ಕಾರ್ಯಕ್ರಮಗಳ ಬಳಕೆಗೆ ಇರುವುದು ಆದರೆ ಇಲ್ಲಿನ ಸಮುದಾಯ ಭವನವನ್ನು ಕಳೆದ ಹತ್ತು ತಿಂಗಳಿನಿಂದ ಗುತ್ತಿಗೆದಾರರೊಬ್ಬರು ಸಿಮೆಂಟ್ ಸಂಗ್ರಹಕ್ಕೆ ಬಳಸಿಕೊಂಡಿದ್ದಾರೆ. ಇದರಿಂದ ಸಮುದಾಯ ಭವನ ಸ್ಥಳೀಯ ಜನರ ಉಪಯೋಗಕ್ಕೆ ಬಾರದಂತಾಗಿದೆ. ಈ ಬಗ್ಗೆ ಗೋಣಿಬೀಡು ಗ್ರಾಮ ಪಂಚಾಯಿತಿಯವರಿಗೆ ಮಾಹಿತಿ ನೀಡಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಈ ವಿಚಾರವಾಗಿ ಕ್ರಮ ಕೈಗೊಂಡು ಅಕ್ರಮವಾಗಿ ಸಿಮೆಂಟ್ ಸಂಗ್ರಹ ಮಾಡಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಿ ಸಮುದಾಯ ಭವನದಲ್ಲಿ ಸಂಗ್ರಹಿಸಿರುವ ಸಿಮೆಂಟ್ ಮೂಟೆಗಳನ್ನು ತೆರವುಗೊಳಿಸಿ, ಅದನ್ನು ಸಂಪೂರ್ಣ ಸ್ವಚ್ಚಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.




