ಇತಿಹಾಸ ಪುಟಗಳನ್ನು ಮೆಲುಕು ಹಾಕಿದರೆ ಮಹಿಳೆಯರು ದೈರ್ಯ, ಶೌರ್ಯದಿಂದ ಹೋರಾಟ ಮಾಡಿರುವುದಕ್ಕೆ ಒನಕೆ ಓಬವ್ವ ಸಾಕ್ಷಿಯಾಗಿದ್ದಾರೆ, ಅವರ ಶೌರ್ಯ ಮನೋಭಾವನೆ ಸ್ಪೂರ್ತಿದಾಯಕವಾಗಿದೆ ಎಂದು ಮೂಡಿಗೆರೆ ತಹಸೀಲ್ದಾರ್ತ ರಾಜಶೇಖರ್ ಮೂರ್ತಿ ಹೇಳಿದರು.
ಅವರು ಸೋಮವಾರ ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒನಕೆ ಓಬವ್ವ ಅವರು ನಾರಿಯ ಶಕ್ತಿ ಸಂಕೇತವಾಗಿದ್ದಾರೆ. ಒನಕೆ ಓಬವ್ವ ಅವರು ಯುದ್ಧ ಮಾಡುವ ಬಗ್ಗೆ ಯಾವುದೇ ತರಬೇತಿ ಪಡೆದಿರಲಿಲ್ಲ. ಆದರೂ ತನ್ನ ಧೈರ್ಯ, ಸಾಮಥ್ಯದಿಂದ ಚಿತ್ರದುರ್ಗ ಕೋಟೆಗೆ ಹೈದರಾಲಿ ಸೈನಿಕರು ಮುತ್ತಿಗೆ ಹಾಕಿದಾಗ, ಸೈನಿಕರೊಂದಿಗೆ ಕೊನೆ ಉಸಿರು ಇರುವವರೆಗೆ ಹೋರಾಟ ನಡೆಸಿ ತನ್ನ ರಾಜ್ಯವನ್ನು ರಕ್ಷಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದರು. ಇದರಿಂದ ಅವರು ಕರ್ನಾಟಕದ ವೀರ ಮಹಿಳೆ ಎಂದು ಹೆಸರುವಾಸಿಯಾಗಿದ್ದಾರೆ. ಅವರ ಚರಿತ್ರೆಯನ್ನು ಯುವ ಜನಾಂಗಕ್ಕೆ ತಿಳಿಸಿಕೊಡುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಪ.ಪಂ. ಉಪಾಧ್ಯಕ್ಷ ಎಚ್.ಪಿ.ರಮೇಶ್, ಛಲವಾದಿ ಮಹಾ ಸಭಾದ ಅಧ್ಯಕ್ಷ ಮಂಜುನಾಥ್ ಬೆಟ್ಟಗೆರೆ, ತಾಲೂಕು ಕೆಡಿಪಿ ಸದಸ್ಯ ಸುರೇಂದ್ರ ಉಗ್ಗೇಹಳ್ಳಿ, ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯ ಅಣ್ಣೇಗೌಡ, ಕೆಂಚಯ್ಯ, ಕೋಮರಾಜ್, ರತನ್ ಕುಮಾರ್, ಧರ್ಮಪಾಲ್, ಲೋಕೇಶ್, ಲಿಂಗರಾಜ್, ಕುಮಾರ್ ಮತ್ತಿತರರಿದ್ದರು.



