ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಮಂಗಳೂರು ಹೊರವಲಯದ ಉಚ್ಚಿಲ ಬೀಚ್ ಬಳಿಯ ಖಾಸಗಿ ಬೀಚ್ ರೆಸಾರ್ಟ್ನಲ್ಲಿ ನಡೆದಿದೆ.
ಮಂಗಳೂರು ಹೊರವಲಯ ಉಚ್ಚಿಲ ಬೀಚ್ ಬಳಿಯ ರೆಸಾರ್ಟ್ನ ಈಜುಕೊಳದಲ್ಲಿ ಈಜಾಡುವಾಗ ಏಕಾಏಕಿ ಮುಳುಗಿ ಮೂವರು ಯುವತಿಯರು ಮೃತಪಟ್ಟಿದ್ದು, ಮೃತಪಟ್ಟವರನ್ನು ಮೈಸೂರು ಕುರುಬರಹಳ್ಳಿಯ ನಾಲ್ಕನೇ ಕ್ರಾಸ್ ನಿವಾಸಿ ನಿಶಿತ ಎಂ.ಡಿ. (21ವ), ಮೈಸೂರು ರಾಮಾನುಜ ರಸ್ತೆ, ಕೆ.ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್ (20ವ), ಮೈಸೂರು ವಿಜಯ ನಗರ ದೇವರಾಜ ಮೊಹಲ್ಲ ನಿವಾಸಿ ಕೀರ್ತನ ಎನ್(21ವ) ಎಂದು ಗುರುತಿಸಲಾಗಿದೆ.
ಶನಿವಾರ ವಾರಾಂತ್ಯ ಮೂವರು ಸ್ನೇಹಿತೆಯರು ಮಂಗಳೂರು ಕಡೆಗೆ ಪ್ರವಾಸಕ್ಕೆಂದು ಬಂದಿದ್ದರು. ಭಾನುವಾರ ಬೆಳಗ್ಗೆ ಹೊರವಲಯದ ಬೀಚ್ ಬಳಿ ಬಂದವರು ರೆಸಾರ್ಟ್ ಗೆ ಆಗಮಿಸಿ ರೂಂ ಬುಕ್ ಮಾಡಿದ್ದರು. ನಂತರ ಆಟವಾಡಲು ಸ್ವಿಮ್ಮಿಂಗ್ ಪೂಲ್ ಗೆ ಇಳಿದಿದ್ದರು. ಈ ವೇಳೆ ಕೊಳದ ಒಂದು ಬದಿ ಆರು ಅಡಿಯಷ್ಟು ಆಳವಿದ್ದು, ಆಯತಪ್ಪಿ ಓರ್ವ ಯುವತಿ ಮುಳುಗಿದ್ದಾಳೆ. ಆಕೆಯ ರಕ್ಷಣೆಗೆ ತೆರಳಿದ ಉಳಿದ ಇಬ್ಬರೂ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಉಳ್ಳಾಲ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೀಚ್ ರೆಸಾರ್ಟ್ ನಿಯಮ ಉಲ್ಲಂಘಿಸಿರುವ ಕಾರಣ ಪರವಾನಗೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ತನಿಖೆ ಮುಗಿಯುವ ವರೆಗೂ ರೆಸಾರ್ಟ್‌ಗೆ ಪೊಲೀಸರು ಬೀಗ ಹಾಕಿದ್ದಾರೆ. ರೆಸಾರ್ಟ್ ಸೀಲ್ ಡೌನ್ ಮಾಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದೇ ವೇಳೆ ನಿಯಮ ಉಲ್ಲಂಘಿಸಿರುವ ಇತರ ರೆಸಾರ್ಟ್ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಘಟನೆಯನ್ನು ಆಧಾರವಾಗಿಟ್ಟುಕೊಂಡು ಎಲ್ಲಾ ರೆಸಾರ್ಟ್‌ಗಳಿಗೆ ಎಚ್ಚರಿಕೆ ನೀಡಲು ಪೊಲೀಸರು ಮುಂದಾಗಿದ್ದಾರೆ. ಹಲವು ರೆಸಾರ್ಟ್‌ಗಳು ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಹೀಗಾಗಿ ಇಂತಹ ರೆಸಾರ್ಟ್‌ಗೆ ಬೀಗ ಹಾಕಲು ಪೊಲೀಸರು ಮುಂದಾಗಿದ್ದಾರೆ.



