ಅಲ್ದೂರಿನಲ್ಲಿ ವಿವಾದಿತ ಜಾಗವೊಂದಕ್ಕೆ ಸಂಬಂಧಿಸಿದಂತೆ ಒಕ್ಕಲಿಗರು ಮತ್ತು ದಲಿತ ಸಮುದಾಯದ ನಡುವೆ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಚಿಕ್ಕಮಗಳೂರು ಜಿಲ್ಲಾಡಳಿತ ನಡೆಸಿದೆ.
ಸೋಮವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಒಕ್ಕಲಿಗರು ಮತ್ತು ದಲಿತ ಮುಖಂಡರ ಪ್ರತ್ಯೇಕ ಸಭೆಯನ್ನು ನಡೆಸಿ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ವಾಸ್ತವಾಂಶ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ. ಜಿಲ್ಲಾಧಿಕಾರಿ ಮೀನಾ ನಾಗರಾಜ್, ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಎಸ್ಪಿ ವಿಕ್ರಂ ಅಮಟೆ, ಜಿ.ಪಂ. ಸಿಇಓ ಕೀರ್ತನಾ ಉಪಸ್ಥಿತರಿದ್ದರು.
ಜಾಗಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿದ್ದು, ವಿವಾದಿತ ಜಾಗ ದಾಖಲೆಯಲ್ಲಿ ಸಾರ್ವಜನಿಕ ಸ್ಮಶಾನವೆಂದು ನಮೂದಾಗಿದೆ. ಹಾಗಾಗಿ ಅದನ್ನು ಸಾರ್ಜಜನಿಕ ಸ್ಮಶಾನಕ್ಕೆ ಮೀಸಲಿರಿಸಲು ಜಿಲ್ಲಾಡಳಿತ ಮನವರಿಕೆ ಮಾಡಿದೆ. ಇದು ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಮೀಸಲಾಗಿಲ್ಲ. ಹಿಂದೂ ಸಾರ್ವಜನಿಕ ರುಧ್ರಭೂಮಿಯಾಗಿದ್ದು, ಹಿಂದೂ ಸಮಾಜದ ಯಾರೇ ಆದರೂ ಶವಸಂಸ್ಕಾರಕ್ಕೆ ಈ ಜಾಗವನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ದಾಖಲೆಯಲ್ಲಿರುವಷ್ಟು ಜಾಗವನ್ನು ಸ್ಮಶಾನಕ್ಕೆ ಮೀಸಲಿರಿಸಿ ಗಡಿ ಗುರುತಿಸಿ ದಾಖಲೆಗಿಂತ ಹೆಚ್ಚುವರಿ ಜಾಗವಿದ್ದರೆ ಒಕ್ಕಲಿಗರ ಸಂಘಕ್ಕೆ ನೀಡಲು ತೀರ್ಮಾನಿಸಲಾಗಿದೆ.
ಇದೇ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ಕಟ್ಟಡ ಮತ್ತು ಚಟುವಟಿಕೆಗಾಗಿ 3 ಎಕರೆ ಭೂಮಿ ನೀಡುವಂತ ಒಕ್ಕಲಿಗರ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರು.
ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ; ಆಲ್ದೂರು ಒಕ್ಕಲಿಗರ ಸಂಘಕ್ಕೆ ಪ್ರತ್ಯೇಕ 3 ಎಕರೆ ಭೂಮಿ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಜಿಲ್ಲಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಮನವಿ ನೀಡಲಾಗಿದೆ ಎಂದುತಿಳಿಸಿದರು.
ಆಲ್ದೂರು ಒಕ್ಕಲಿಗರ ಸಂಘಕ್ಕೆ ಜಾಗ ನಿಗಧಿಪಡಿಸಿದ್ದು, ಸದರಿ ಜಾಗದಲ್ಲಿ ಕಳೆದ 20 ವರ್ಷಗಳ ಹಿಂದೆ ಸ್ಮಶಾನಕ್ಕೆ ಯೋಗ್ಯವಲ್ಲ ಎಂದು ಆಗಿನ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್‌ರವರು ವರದಿ ನೀಡಿದ್ದರಿಂದ ಗ್ರಾಮ ಪಂಚಾಯಿತಿಯಲ್ಲಿ ಒಕ್ಕಲಿಗರ ಸಂಘಕ್ಕೆ ಮೀಸಲಿಡಬೇಕೆಂದು ನಿರ್ಣಯ ಮಾಡಿದ್ದರು.
ಸ್ಥಳೀಯ ಒಕ್ಕಲಿಗರ ಸಂಘದವರು 10 ಲಕ್ಷ ರೂ ಖರ್ಚುಮಾಡಿ ಈ ಭೂಮಿಯನ್ನು ಸುಂದರ ತಾಣವನ್ನಾಗಿ ಮಾಡಿದ್ದರು. ಆದರೆ ಅದು ದಾಖಲೆಯಲ್ಲಿ ಸ್ಮಶಾನ ಎಂದು ನಮೂದಾಗಿದ್ದರಿಂದ ಇದರ ಆಧಾರದಲ್ಲಿ ಕೆಲವು ಸಂಘಟನೆಗಳು ಪ್ರಚೋಧನೆ ನೀಡಿ ಶವ ಸಂಸ್ಕಾರಕ್ಕೆ ಮುಂದಾಗಿದ್ದಾರೆಂದು ದೂರಿದರು.
ಈ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿದ್ದು ವಿವಾದ ಇರುವುದರಿಂದ ಅಂತಹ ಜಾಗದಲ್ಲಿ ಏಕಾಏಕಿ ಪೊಲೀಸರ ಮಧ್ಯಸ್ಥಿಕೆಯಿಂದ ಶವ ಸಂಸ್ಕಾರಕ್ಕೆ ಮುಂದಾಗಿರುವುದು ಖಂಡನೀಯ. ಇದರಿಂದಾಗಿ ಸ್ಥಳೀಯ ಒಕ್ಕಲಿಗರ ಮನಸ್ಸಿಗೆ ನೋವುಂಟಾಗಿದೆ ಎಂದು ತಿಳಿಸಿದರು.
ಈ ಸಂಬಂಧ ಇಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ತಹಶೀಲ್ದಾರ್ ಜೊತೆ ಚರ್ಚಿಸಿ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಂಡು ಸಾರ್ವಜನಿಕ ಹಿಂದೂ ಸ್ಮಶಾನ ಭೂಮಿಯಾಗಿರುವುದರಿಂದ ಆಲ್ದೂರು ಗ್ರಾಮ ಪಂಚಾಯಿತಿಯಿಂದ ಅಭಿವೃದ್ಧಿಪಡಿಸುವ ಜೊತೆಗೆ ಒಕ್ಕಲಿಗರ ಸಂಘದ ಚಟುವಟಿಕೆಗೆ ಪ್ರತ್ಯೇಕ 3 ಎಕರೆ ಜಾಗವನ್ನು ಮೀಸಲಿಡಬೇಕೆಂದು ನಿರ್ಣಯ ಮಾಡಲಾಗಿದೆ ಎಂದು ಹೇಳಿದರು.
ಗ್ರಾಮದಲ್ಲಿ ಸಾಮರಸ್ಯ ಹಾಳುಮಾಡಲು ಕೆಲವು ಸಂಘಟನೆಗಳು ಪಿತೂರಿ ನಡೆಸಿರುವುದು ಬೆಳಕಿಗೆ ಬಂದಿದ್ದು ಇದನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇವೆ ಎಂದರು.
ಮುಂದೆ ಈ ರೀತಿ ಘಟನೆಗಳು ಮರುಕಳಿಸದಂತೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಒಕ್ಕಲಿಗರ ಮುಖಂಡರ ಜೊತೆ ಆ ಸಮುದಾಯದವರಿಗೂ ಆಹ್ವಾನಿಸಿದ್ದು, ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಮುಖಂಡ ಕವೀಶ್ ಮಾತನಾಡಿ, ವಿವಾದಿತ ಭೂಮಿಯನ್ನು ಸರ್ವೆ ಮಾಡಿ ಸ್ಮಶಾನ ಜಾಗವನ್ನು ಹೊರತುಪಡಿಸಿ ಉಳಿದ ಜಾಗವನ್ನು ಆಲ್ದೂರು ಒಕ್ಕಲಿಗರ ಸಂಘಕ್ಕೆ ನೀಡಬೇಕೆಂಬ ಬೇಡಿಕೆ ಇಟ್ಟಿದ್ದು ಜೊತೆಗೆ ಬದಲಿ 3 ಎಕರೆ ಜಾಗವನ್ನು ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದು ಹೇಳಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಆ ಭಾಗದಲ್ಲಿ ಕಂದಾಯ ಭೂಮಿ ಇದ್ದರೆ ಗುರ್ತಿಸಿ ತಿಳಿಸಿ, ಸರ್ವೆ ಮಾಡಿ ದಾಖಲಾತಿಯನ್ನು ಸಂಘದ ಹೆಸರಿಗೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದ ಅವರು, ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಸೌಹಾರ್ದಯುತವಾಗಿ ಮುಂದುವರೆಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಮುಖಂಡರಾದ ರಂಜನ್ ಅಜಿತ್ ಕುಮಾರ್, ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಪ್ರಕಾಶ್, ಉಪಾಧ್ಯಕ್ಷರಾದ ಲಕ್ಷ್ಮಣ್ ಗೌಡ, ನಿರ್ದೇಶಕರುಗಳಾದ ಕೆ.ಕೆ.ಮನುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.



