ಅನಂತ್ ಎಂ.ಎಸ್.
ಜಗತ್ತಿನಲ್ಲಿಯೇ ಅತ್ಯುತ್ತಮ ಸಂವಿಧಾನ ಬರೆಯುವ ಮೂಲಕ ಭಾರತದ ಕೀರ್ತಿಯನ್ನು ವಿಶ್ವಾದ್ಯಂತ ಪಸರಿಸಿರುವ, ದೇಶದ ಶೋಷಿತ ಸಮುದಾಯಗಳೂ ಸೇರಿದಂತೆ ಎಲ್ಲ ವರ್ಗದವರ ಸರ್ವತೋಮುಖ ಏಳಿಗೆಗೆ ಪೂರಕವಾದ ಸಂವಿಧಾನ ರಚಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಅಂಬೇಡ್ಕರ್ ಸಂವಿಧಾನದಿಂದಾಗಿಯೇ ಸಂಸತ್ ಪ್ರವೇಶಿಸಿರುವ ಅಮಿತ್ ಶಾ ಹೇಳಿಕೆಯಿಂದಾಗಿ ಸಂವಿಧಾನವನ್ನು ಗೌರವಿಸುವ ಪ್ರತಿಯೊಬ್ಬರ ಭಾವನೆಗಳಿಗೆ ನೋವುಂಟಾಗಿದೆ, ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಕ್ಷಮೆಯಾಚನೆ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಬುಧವಾರ ಪತ್ರಿಕಾ ಪ್ರಕಟನೆ ನೀಡಿರುವ ಅವರು, “ಇತ್ತೀಚೆಗೆ ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಒಂದು ಫ್ಯಾಶನ್ ಆಗಿದೆ, ಅಂಬೇಡ್ಕರ್ ಹೆಸರು ಹೇಳುವ ಬದಲು ದೇವರ ಜಪ ಮಾಡಿದ್ದರೇ 7ಜನ್ಮಗಳಲ್ಲೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು” ಎನ್ನುವ ಮೂಲಕ ಕೇಂದ್ರ ಸಚಿವ ಅಮಿತ್‌ಶಾ ಜಗತ್ತಿನ ಮಹಾಜ್ಞಾನಿ, ದೇಶದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ಅಂಬೇಡ್ಕರ್ ಈ ದೇಶಕಂಡ ಮಹಾಮಾನವತಾವಾದಿ. ಜಾತೀಯತೆ, ಅಸ್ಪೃಶ್ಯತೆಯೇ ಸಂಸ್ಕೃತಿಯಾಗಿದ್ದ ಕಾಲಘಟ್ಟದಲ್ಲಿ ಜನಿಸಿದ್ದ ಅಂಬೇಡ್ಕರ್ ಮನುವಾದಿಗಳ ಕರಾಳ ಅಸ್ಪೃಶ್ಯತೆಯನ್ನು ಸ್ವತಃ ಅನುಭವಿಸಿದ್ದವರು. ದೇವರು, ಧರ್ಮದ ಹೆಸರಿನಲ್ಲಿ ಜಾತೀಯತೆ, ಸಂಪ್ರದಾಯ, ಮಡಿವಂತಿಕೆ ಎಂಬ ಅಮಾನವೀಯ ಸಂಕಷ್ಟಗಳಿಂದ ನಲುಗಿ ಹೋಗಿದ್ದ ಅವರು ಅದರಿಂದ ಧೃತಿಗೆಡಸದೇ ಮನುವಾದಿಗಳು ಬರೆದಿದ್ದ ದೇಶದ ಹಣೆಬರಹವನ್ನು ತಮ್ಮ ವೈಚಾರಿಕ ಜ್ಞಾನದಿಂದ ಬದಲಾಯಿಸಿದವರು ಅಂಬೇಡ್ಕರ್. ಅಂಬೇಡ್ಕರ್ ಈ ದೇಶದಲ್ಲಿ ಹುಟ್ಟದೇ ಇದ್ದಿದ್ದರೇ ಭಾರತದ ಕೋಟ್ಯಂತರ ಶೋಷಿತ ಸಮುದಾಯಗಳು, ಮಹಿಳೆಯರ ಬದುಕು ಊಹಿಸಿಕೊಳ್ಳಲಾಗದಂತಹ ಸ್ಥಿತಿಯಲ್ಲಿರುತ್ತಿತ್ತು. ಇಂತಹ ಮಹಾನಾಯಕನ ಬಗ್ಗೆ ಅಮಿತ್ ಶಾ ಆಡಿರುವ ಮಾತುಗಳು ಮಹಾಪರಾಧವಾಗಿದೆ ಎಂದು ಟೀಕಿಸಿದ್ದಾರೆ.
ಅಂಬೇಡ್ಕರ್ ಕೇವಲ ದಲಿತರು, ಶೋಷಿತರ ನಾಯಕರಲ್ಲ, ಅವರು ಭಾರತ ಹಾಗೂ ಜಗತ್ತಿನ ಮಹಾನಾಯಕರಾಗಿದ್ದಾರೆ. ಅಂಬೇಡ್ಕರ್ ಸಂವಿಧಾನ ಬರೆಯುವಾಗ ಕೇವಲ ತಮ್ಮ ಸಮುದಾಯದವರಿಗಾಗಿ ಸಂವಿಧಾನ ಬರೆದಿಲ್ಲ. ದೇಶದ ಪ್ರತೀ ನಾಗರಿಕರ ಉನ್ನತಿಗಾಗಿ ಸಂವಿಧಾನ ಬರೆದಿದ್ದಾರೆ. ಅವರ ಸಂವಿಧಾನಂದಿದಾಗಿಯೇ ಅಮಿತ್ ಶಾ ಅವರಂತಹ ಮನುವಾದಿ, ಟೀ ಮಾರುತ್ತಿದ್ದ ಮೋದಿ ಕೂಡ ಸಂಸದರಾಗಿ ಗೃಹಮಂತ್ರಿ, ಪ್ರಧಾನಿಯಾಗುವಂತಾಗಿದೆ ಎಂದು ತಿಳಿಸಿರುವ ಅವರು, ಅಮಿತ್‌ಶಾ ಅಪ್ಪಟ ಕೋಮುವಾದಿ ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಅಂಬೇಡ್ಕರ್ ಸಂವಿಧಾನವನ್ನೇ ಬದಲಾಯಿಸುವ ಹಿಡನ್ ಅಜೆಂಡಾ ಹೊಂದಿರುವ ಬಿಜೆಪಿ ಪಕ್ಷದ ನಾಯಕ ಪಕ್ಷದ ಹಿಡನ್ ಅಜೆಂಡವನ್ನು ಹೊರಹಾಕುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಬಿಜೆಪಿ ಸಂಸದರು ಈ ಹಿಂದೆ ಹೇಳಿಕೆ ನೀಡಿದ್ದಾರೆ. ಇದರ ಮುಂದುವರಿದ ಭಾಗ ಎಂಬಂತೆ ಅಮಿತ್ ಶಾ ತಾನು ಈ ದೇಶದ ಗೃಹ ಮಂತ್ರಿ ಎಂಬುದನ್ನು ಮರೆತು ಸಂವಿಧಾನ ರಚನೆಯಾದ ಸಂಸತ್‌ನಲ್ಲೇ ಅಂಬೇಡ್ಕರ್ ವಿರುದ್ಧ ಧ್ವೇಷ ಕಾರಿದ್ದಾರೆ. ಈ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವರು ಅಪಮಾನ ಮಾಡಿದ್ದಾರೆ. ಅಮಿತ್ ಶಾ ಹೇಳಿಕೆಯಿಂದಾಗಿ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆಯಾಗಿದ್ದು, ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ದೇಶದ ಜನರ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.



