ಕನ್ನಡದ ಹಿರಿಯ ನಟ ಡಾ. ಶಿವರಾಜ್‌ಕುಮಾರ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸದ್ಯ ಶಿವಣ್ಣ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಮೇರಿಕಾ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ವೈದ್ಯ ಡಾ.ಮುರುಗೇಶ್ ಮನೋಹರನ್ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ವೀಡಿಯೋ ಮೂಲಕ ಮಾತನಾಡಿದ ಅವರು, ದೇವರ ದಯೆಯಿಂದ ಹಾಗೂ ಹಲವರ ಆಶೀರ್ವಾದ ಹಾಗೂ ಪ್ರಾರ್ಥನೆಯಿಂದ ಸರ್ಜರಿ ಯಶಸ್ವಿಯಾಗಿದೆ. ಪ್ರಮುಖ ಹಂತ ಪೂರ್ಣಗೊಂಡಿದೆ. ಶಿವಣ್ಣ ಚೆನ್ನಾಗಿ ಸ್ಪಂದಿಸಿದ್ದಾರೆ. ಸರ್ಜರಿ ನಂತರವೂ ಆರಾಮಾಗಿದ್ದಾರೆ. ಅವರು ಶೀಘ್ರವೇ ಸಂಪೂರ್ಣ ಚೇತರಿಕೆ ಕಾಣಲಿದ್ದಾರೆ. ನಿಮ್ಮ ಬೆಂಬಲಕ್ಕೆ ಧನ್ಯವಾದ ಎಂದು ಹೇಳಿದ್ದಾರೆ
ಡಾ. ಶಿವರಾಜ್‌ಕುಮಾರ್ ಅವರ ಅಭಿಮಾನಿಗಳು, ಸಹೋದ್ಯೋಗಿಗಳು, ಶುಭಚಿಂತಕರು ಮತ್ತು ಮಾಧ್ಯಮಗಳಿಗೆ ಈ ಸಂದರ್ಭದಲ್ಲಿ ತೋರಿಸಿದ ನಿರಂತರ ಬೆಂಬಲ, ಪ್ರಾರ್ಥನೆ ಮತ್ತು ಮೆಚ್ಚುಗೆ ಸಂದೇಶಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹವು ಡಾ. ಶಿವರಾಜ್‌ಕುಮಾರ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಶಕ್ತಿ ಒದಗಿಸಿದೆ ಎಂದು ತಿಳಿಸಿದ್ದಾರೆ.

ಶಿವರಾಜ್‌ಕುಮಾರ್ ಅಮೆರಿಕದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸೆಂಬರ್ 24ರಂದು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ವೇಳೆ ಏನು ಮಾಡಲಾಯಿತು ಎಂಬುದರ ಕುರಿತು ವೈದ್ಯರು ಮಾಹಿತಿ ನೀಡಿದ್ದಾರೆ. ಇದೆಲ್ಲದರ ಜೊತೆಗೆ ಅವರ ಆರೋಗ್ಯದ ಬಗ್ಗೆಯೂ ಅಪ್ಡೇಟ್ ನೀಡಲಾಗಿದೆ.
ಶಿವರಾಜ್‌ಕುಮಾರ್ ಅವರು ಮೊದಲು ಕ್ಯಾನ್ಸರ್ ಇರುವ ವಿಚಾರವನ್ನು ರಿವೀಲ್ ಮಾಡಲಾಗಿರಲಿಲ್ಲ. ಅನಾರೋಗ್ಯ ಎಂದಷ್ಟೇ ಅವರು ಹೇಳಿದ್ದರು. ಅಮೆರಿಕಕ್ಕೆ ತೆರಳುವುದಕ್ಕೂ ಮೊದಲು ಅವರು ಈ ಬಗ್ಗೆ ಮಾಹಿತಿ ನೀಡಿದರು. ತಮಗೆ ಕ್ಯಾನ್ಸರ್ ಇರುವ ವಿಚಾರವನ್ನು ಅವರು ಒಪ್ಪಿಕೊಂಡರು. ಶಿವರಾಜ್‌ಕುಮಾರ್ ಅವರಿಗೆ ಮೂತ್ರಪಿಂಡದ ಕ್ಯಾನ್ಸರ್ ಇತ್ತು ಎಂಬುದು ನಂತರ ರಿವೀಲ್ ಆಯಿತು.
‘ಸದ್ಯ ಕ್ಯಾನ್ಸರ್ ತಗುಲಿದ ಮೂತ್ರ ಪಿಂಡವನ್ನ ತೆಗೆದು ಹಾಕಲಾಗಿದೆ. ಶಸ್ತ್ರಚಿಕಿತ್ಸೆ ನಂತರ ಕರುಳನ್ನು ಬಳಸಿ ಕೃತಕ ಮೂತ್ರ ಪಿಂಡವನ್ನ ಅಳವಡಿಸಲಾಗಿದೆ. ಶಿವರಾಜ್‌ಕುಮಾರ್ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದಾರೆ’ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.



