ಲೀಲಾವತಿ
ಸಾಲ ಮರುಪಾವತಿಸುವಂತೆ ಮೈಕ್ರೋ ಫೈನಾನ್ಸ್ ಕಂಪನಿಯೊಂದರ ಸಿಬ್ಬಂದಿ ನೀಡಿದ ಕಿರುಕುಳದಿಂದ ಬೇಸತ್ತು ಚಿಕ್ಕಮಗಳೂರು ಜಿಲ್ಲೆಯ ರೈತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ತಾನೆ ಚನ್ನಪಟ್ಟಣ ತಾಲೂಕಿನ ಮೈಲನಾಯ್ಕನಹಳ್ಳಿ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು 50 ವರ್ಷದ ಲೀಲಾವತಿ ಎಂಬವವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಾಗಿ ಮರುದಿನವೇ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಅಂತಹುದೇ ಪ್ರಕರಣ ದಾಖಲಾಗಿದೆ.
ಮೃತರನ್ನು 64 ವರ್ಷದ ದೇವಿರಮ್ಮ ಎಂದು ಗುರುತಿಸಲಾಗಿದ್ದು, ಕಡೂರು ತಾಲೂಕಿನ ತಂಗಲಿ ಗ್ರಾಮದಲ್ಲಿ ಘಟನೆ ನಡೆದಿದೆ.
ಸಂತ್ರಸ್ತೆ ಗ್ರಾಮೀಣ ಕೂಟ ಫೈನಾನ್ಸ್ ಕಂಪನಿಯಲ್ಲಿ 78 ಸಾವಿರ ಸಾಲ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳೆ ನಾಶವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಆಕೆ ಒಂದು ತಿಂಗಳಿಂದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ಕಂಪನಿಯ ಸಿಬ್ಬಂದಿ ವಾರದಿಂದ ಆಕೆಯ ಮನೆಗೆ ಬರುತ್ತಿದ್ದರು ಮತ್ತು ಸಾಲ ಮರುಪಾವತಿ ಮಾಡುವಂತೆ ಕಿರುಕುಳ ಮತ್ತು ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಈ ಚಿತ್ರಹಿಂಸೆ ತಾಳಲಾರದೆ ಮಹಿಳೆ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಕ್ರೋ ಫೈನಾನ್ಸ್ ಕಂಪನಿಯ ಸಿಬ್ಬಂದಿಗಳಾದ ಶಂಕರ್ ನಾಯಕ್, ಉಷಾ ಮತ್ತು ರುಬೀನಾ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಹಲವಾರು ಮೈಕ್ರೋ ಫೈನಾನ್ಸ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಅವು ನೀಡುವ ಸಾಲ ವಸೂಲಾತಿಗೆ ಏಜೆಂಟ್ ಗಳನ್ನು ನೇಮಿಸಿಕೊಂಡು ಮರುಪಾವತಿ ವಿಳಂಬವಾದರೆ ವಿಪರೀತ ಕಿರುಕುಳ ನೀಡುತ್ತಾರೆ ಎಂಬ ದೂರುಗಳು ಕೇಳಿಬರುತ್ತಿದೆ. ಇತ್ತೀಚೆಗೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಹಲವಾರು ಆತ್ಮಹತ್ಯೆ ಪ್ರಕರಣಗಳು, ಊರು ತೊರೆಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.



