ಮೂಡಿಗೆರೆ ಪಟ್ಟಣದ ಗೆಂಡೇಹಳ್ಳಿ ರಸ್ತೆಯ ಹಳೇಆಸ್ಪತ್ರೆ ಬಳಿ ಕಳೆದ 74 ವರ್ಷದಿಂದ ಸಾರ್ವಜನಿಕರಿಗೆ ಉಪಯೋಗವಾಗುತ್ತಿದ್ದ ರಾಜ್ಯ ಹೆದ್ದಾರಿ ವಿರಾಜಪೇಟೆ ಮತ್ತು ಬೈಂದೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಏಕಾಏಕಿ ಆರೋಗ್ಯ ಇಲಾಖೆ ಮದ್ಯೆ ಪ್ರವೇಶಿಸಿ, ರಸ್ತೆ ಬಂದ್ ಮಾಡಿ, ಕಾಂಪೌಂಡ್ ನಿರ್ಮಾಣ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಎದುರಾಗಿದೆ ಎಂದು ಸ್ಥಳೀಯ ನಿವಾಸಿ ಎಂ.ಎನ್.ಸದಾಶಿವ ದೂರಿದರು.
ಶನಿವಾರ ಮೂಡಿಗೆರೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ; ಅ ಪ್ರದೇಶದಲ್ಲಿ ತನ್ನ ಪಿತ್ರಾರ್ಜಿತ ಆಸ್ತಿ ಇದ್ದು ಅಲ್ಲಿಯೇ ವಾಸವಿದ್ದೇನೆ. ತಾನೂ ಸೇರಿದಂತೆ 1970ರಿಂದಲೂ ಕೃಷಿ ಭೂಮಿ, ವಾಸದ ಮನೆಗಳಿಗೆ ತೆರಳಲು ಇದೇ ರಸ್ತೆ ಬಳಸಿಕೊಳ್ಳುತ್ತಿದ್ದು, ಅಲ್ಲದೇ ಹಲವಾರು ವರ್ಷದಿಂದ ಸುಮಾರು 50ಕ್ಕೂ ಅಧಿಕ ರೈತ ಕುಟುಂಬ ಈ ರಸ್ತೆಯನ್ನೇ ಅವಲಂಬಿಸಿ ಕೃಷಿ ಚಟುವಟಿಕೆ ನಡೆಸಿ ಬದುಕುತ್ತಿದ್ದಾರೆ.
ಅಲ್ಲದೇ ಈ ರಸ್ತೆ ಬದಿಯಲ್ಲಿ ಉದ್ಭವ ಗಂಗಾಧರೇಶ್ವರ ದೇವಸ್ಥಾನವಿದೆ. ಈ ದೇವಸ್ತಾನಕ್ಕೆ ಗ್ರಾ.ಪಂ.ಯಿಂದ ಕಟ್ಟಡ ಕಾಮಗಾರಿಗೆ ಹಾಗೂ ತಾ.ಪಂ.ಅನುದಾನದಲ್ಲಿ ಸಭಾಂಗಣದ ಅಭಿವೃದ್ಧಿ ಕಾರ್ಯ ನಡೆದಿದೆ. 1988ರಲ್ಲಿ ಹಳೆ ಮೂಡಿಗೆರೆ ಗ್ರಾ.ಪಂ. ಮಟ್ಟದಲ್ಲಿ ಈ ರಸ್ತೆಗೆ ಅನುಮತಿ ನೀಡಿ, ನರೇಗಾ ಯೋಜನೆಯಡಿಯಲ್ಲಿ 48.650 ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಮಾಡಲಾಗಿದೆ ಎಂದು ಹೇಳಿದರು.
ಈ ಪ್ರದೇಶದಲ್ಲಿ ಈಗಾಗಲೇ ನಿಯಮಾನುಸಾರವಾಗಿ ಹೊಸ ಲೇಔಟ್ ಅಭಿವೃದ್ಧಿಗೊಂಡಿದ್ದು, 30ರಿಂದ 40 ಅಡಿ ರಸ್ತೆ, ಚರಂಡಿ, ವಿದ್ಯುತ್ ಕಂಬ ಹಾಕಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲಿ ಆರೋಗ್ಯ ಇಲಾಖೆ ಸೇರಿದ್ದ ಜಾಗಕ್ಕೆ ಹೊಂದಿಕೊಂಡಿರುವ ರಸ್ತೆಗೆ ಅಧಿಕಾರಿಗಳು ಆರೋಗ್ಯ ಇಲಾಖೆ ದಿಢೀರ್ ಬಂದ್‍ಗೊಳಿಸುವ ಜತೆಗೆ ನೀರಿನ ಸಂಪರ್ಕ ಕಡಿತಗೊಳಿಸಿದೆ.
ಈ ರಸ್ತೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಟ್ಟಲ್ಲಿ ಸರಕಾರಕ್ಕೆ ರಾಜಧನ ಸಂದಾಯವಾಗುವ ಜತೆಗೆ ಮೂಲಬೂತ ಸೌಕರ್ಯಕ್ಕೆ ಅನುಕೂಲವಾಗುತ್ತದೆ ಹಾಗಾಗಿ ಅನೇಕ ವರ್ಷದಿಂದ ಬಳಸಿಕೊಳ್ಳುತ್ತಿದ್ದ ರಸ್ತೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಅಮೃತ್, ದಿನೇಶ್ ಬೋರಾ ಉಪಸ್ಥಿತರಿದ್ದರು.
*****
ಹಳೇಮೂಡಿಗೆರೆ ಗ್ರಾಮ ಪಂಚಾಯಿತಿಯಲ್ಲಿ ನಕ್ಷೆಗೆ ಅನುಮತಿ ಪಡೆದು ಇಲ್ಲಿ ಲೇಯೌಟ್ ನಿರ್ಮಾಣ ಮಾಡಲಾಗಿದೆ. ಬಹಳ ಹಿಂದಿನಿಂದಲೂ ಇಲ್ಲಿ ರೈತರು ತಮ್ಮ ಜಮೀನುಗಳಿಗೆ ತೆರಳಲು ಈ ರಸ್ತೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಈಗ ಏಕಾಏಕಿ ಆರೋಗ್ಯ ಇಲಾಖೆ ರಸ್ತೆಗೆ ಅಡ್ಡಗಟ್ಟುತ್ತಿರುವುದು ತುಂಬಾ ಸಮಸ್ಯೆ ಉಂಟುಮಾಡಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಮಧ್ಯಪ್ರವೇಶಿಸಿ ಜನರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕು.
ದಿನೇಶ್ ಬೋರಾ, ಮೂಡಿಗೆರೆ
ಆರೋಗ್ಯ ಇಲಾಖೆ ಕಮಿಷನರ್ ಪತ್ರದ ಮೇರೆಗೆ ಇಲಾಖೆಗೆ ಸಂಬಂಧಿಸಿದ ಆಸ್ತಿಗಳ ರಕ್ಷಣೆಗೆ ಕ್ರಮ ವಹಿಸಲಾಗಿದೆ. ಮೂಡಿಗೆರೆ ಹಳೇಆಸ್ಪತ್ರೆ ಇದ್ದ ಜಾಗ ಒಂದು ಎಕರೆ ಹತ್ತು ಗುಂಟೆ ಜಾಗವನ್ನು ಸರ್ವೇ ಇಲಾಖೆ ಮತ್ತು ಕಂದಾಯ ಇಲಾಖೆ ಗಡಿಗುರುತು ಮಾಡಿಕೊಟ್ಟ ಜಾಗಕ್ಕೆ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಇಲ್ಲಿ ಯಾವುದೇ ರಸ್ತೆಯನ್ನು ನಕಾಶೆಯಲ್ಲಿ ಕಾಣಿಸಿಲ್ಲ. ನಮ್ಮ ಇಲಾಖೆಗೆ ಸಂಬಂಧಿಸಿದ ಜಾಗಕ್ಕಷ್ಟೇ ನಾವು ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದೇವೆ.
ಡಾ. ಪ್ರಿಯಾಂಕ, ಆಡಳಿತ ವೈದ್ಯಾಧಿಕಾರಿ, ಎಂ.ಜಿ.ಎಂ. ಆಸ್ಪತ್ರೆ, ಮೂಡಿಗೆರೆ



